ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿವಿಧಾನಸಭಾ ಚುನಾವಣೆ ಹಿನ್ನೆಲೆ ಕೋಲ್ಕತ್ತಾ, ಉತ್ತರ 24 ಪರಗಣ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳನ್ನು ಅತಿ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಿರುವ ಭಾರತದ ಚುನಾವಣಾ ಆಯೋಗವು ಬಿಗಿ ಭದ್ರತೆ ಒದಗಿಸಲು ನಿರ್ಧರಿಸಿದೆ
ಇತರ ಜಿಲ್ಲೆಗಳಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿಪಿಎಎಫ್) ಕೆಲ ಸಿಬ್ಬಂದಿಯನ್ನು ಕೋಲ್ಕತ್ತಾ, ಉತ್ತರ 24 ಪರಗಣ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ನಿಯೋಜಿಸಲು ಚುನಾವಣಾ ಆಯೋಗ ಪ್ಲಾನ್ ಮಾಡಿದೆ. ಈಗಾಗಲೇ ಕೆಲ ಸಿಪಿಎಎಫ್ ಸಿಬ್ಬಂದಿ ಈ ಪ್ರದೇಶಗಳಲ್ಲಿ ಅಭ್ಯಾಸಗಳಲ್ಲಿ ತೊಡಗಿದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಯ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ ಚುನಾವಣೆ: ಬಿಜೆಪಿಗೆ ಕಡಿವಾಣ ಹಾಕಲು ಮಮತಾಗೆ ತೇಜಸ್ವಿ ಬೆಂಬಲ!
ರಾಜ್ಯದಲ್ಲಿ 294 ಸ್ಥಾನಗಳಿಗೆ ಎಂಟು ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 27 ರಂದು ಮೊದಲ ಹಂತದಲ್ಲಿ 30 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಏಪ್ರಿಲ್ 29 ರಂದು ಕೊನೆಯ ಹಂತದ ಎಲೆಕ್ಷನ್ ಮುಕ್ತಾಯವಾಗಲಿದ್ದು, ಮೇ 2 ರಂದು ಫಲಿತಾಂಶ ಹೊರ ಬೀಳಲಿದೆ.
ಟಿಎಂಸಿ, ಬಿಜೆಪಿ ಹಾಗೂ ಎಡಪಕ್ಷಗಳ ಮೈತ್ರಿಯೊಂದಿಗೆ ಕಾಂಗ್ರೆಸ್ ಚುನಾವಣಾ ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಮತಾ ಬ್ಯಾನರ್ಜಿ ಸತತ ಮೂರನೇ ಬಾರಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಹರಸಾಹಸ ಪಡುತ್ತಿದ್ದು, 294 ಸ್ಥಾನಗಳ ಪೈಕಿ 200 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ.