ಪುಣೆ(ಮಹಾರಾಷ್ಟ್ರ):ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ಸೆಲ್ಫಿ ತೆಗೆಸಿಕೊಂಡ ನಂತರ ನಾಪತ್ತೆಯಾಗಿದ್ದ, ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಯಾಗಿರುವ ಕಿರಣ್ ಗೋಸಾವಿಯನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2018ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್ ಗೋಸಾವಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಕಿರಣ್ ಗೋಸಾವಿ 2019ರಿಂದ ನಾಪತ್ತೆಯಾಗಿದ್ದಾನೆ ಎಂದು ಪುಣೆ ನಗರ ಪೊಲೀಸರು ಘೋಷಿಸಿದ್ದರು. ಕಾಣೆಯಾಗಿದ್ದ ಕಿರಣ್ ಗೋಸಾವಿ ಕ್ರೂಸ್ ಶಿಪ್ ಮೇಲೆ ಎನ್ಸಿಬಿ ದಾಳಿ ನಡೆಸಿದ ನಂತರ ಪತ್ತೆಯಾಗಿದ್ದ. ಅಕ್ಟೋಬರ್ 14ರಂದು ಪೊಲೀಸರು ಆತನ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿದ್ದರು.
ಉತ್ತರ ಪ್ರದೇಶದ ರಾಜಧಾನಿ ಲಖನೌ ಪೊಲೀಸರಿಗೆ ಶರಣಾಗುವುದಾಗಿ ಹೇಳಿದ್ದರೆನ್ನಲಾದ ಮೂರು ದಿನಗಳ ನಂತರ ಸೆಲ್ಫಿ ಮ್ಯಾನ್ ಕಿರಣ್ ಗೋಸಾವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ನನಗೆ ಜೀವ ಬೆದರಿಕೆ ಇದೆ, ಆದ್ದರಿಂದ ಮಹಾರಾಷ್ಟ್ರ ಪೊಲೀಸರ ಬದಲಿಗೆ ಉತ್ತರಪ್ರದೇಶ ಪೊಲೀಸರ ಮುಂದೆ ಶರಣಾಗುತ್ತೇನೆ ಎಂದು ಕಿರಣ್ ಗೋಸಾವಿ ಹೇಳಿದ್ದರೆನ್ನಲಾದ ಆಡಿಯೋ ವೈರಲ್ ಆಗಿತ್ತು.
ಖಾಸಗಿ ತನಿಖಾಧಿಕಾರಿ (ಪ್ರೈವೇಟ್ ಡಿಟೆಕ್ಟಿವ್) ಆಗಿರುವ ಕಿರಣ್ ಗೋಸಾವಿ ಶಾರೂಖ್ ಖಾನ್ ಮ್ಯಾನೇಜರ್ನನ್ನೂ ಕೂಡಾ ಭೇಟಿಯಾಗಿದ್ದು, ಎನ್ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಎದುರಲ್ಲೇ 9ರಿಂದ 10 ಪುಟಗಳಷ್ಟು ಖಾಲಿ ಹಾಳೆಗಳಿಗೆ ಸಹಿ ಹಾಕುವಂತೆ ಕೇಳಿದ್ದನ್ನು ನಾನು ನೋಡಿದ್ದೇನೆ ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. ಇನ್ನು ಪ್ರಭಾಕರ್ ಸೈಲ್ ಕಿರಣ್ ಗೋಸಾವಿಯ ಪರ್ಸನಲ್ ಬಾಡಿಗಾರ್ಡ್ ಕೂಡಾ ಆಗಿದ್ದಾರೆ.