ತಿರುವನಂತಪುರಂ: ಕೇರಳ ರಾಜ್ಯವು ಗುರುವಾರದಿಂದ ಸಂಪೂರ್ಣ ಇ - ಆಡಳಿತ ರಾಜ್ಯವಾಗಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ 'ಸಂಪೂರ್ಣ ಇ-ಆಡಳಿತ ಕೇರಳ' (Total e-Governance Kerala) ಘೋಷಣೆ ಮಾಡಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. 800ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಆನ್‌ಲೈನ್‌ನಲ್ಲಿ ಸಂಯೋಜಿಸುವ ಇ-ಸೇವನಂ ಎಂಬ ಏಕ ಗವಾಕ್ಷಿ ಸೇವಾ ವಿತರಣಾ ಕಾರ್ಯವಿಧಾನವನ್ನು ಸರ್ಕಾರ ನಿರ್ಮಿಸಿದೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಸರ್ಕಾರಿ ಸೇವೆಗಳು ಸಂಪೂರ್ಣ ಆನ್‌ಲೈನ್ ಮೂಲಕ ಲಭ್ಯವಾಗಲಿವೆ ಎಂದು ಅದು ಹೇಳಿದೆ.
ಕೇರಳವು ದೇಶದ ಮೊದಲ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದೆ ಮತ್ತು ಸಂಪೂರ್ಣ ಇ-ಸಾಕ್ಷರ ಸಮಾಜವಾಗಲು ತನ್ನ ಅನ್ವೇಷಣೆಯನ್ನು ಪ್ರಾರಂಭಿಸಿದ ದಶಕಗಳ ನಂತರ ಈ ವಿಶಿಷ್ಟ ಸಾಧನೆಯನ್ನು ಮಾಡಲಾಗಿದೆ. ರಾಜ್ಯವನ್ನು ಸಂಪೂರ್ಣ ಡಿಜಿಟಲ್ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವ ಸರ್ಕಾರದ ದೂರದೃಷ್ಟಿಯ ನೀತಿ ಉಪಕ್ರಮಗಳ ಮೂಲಕ ಇದು ಸಾಕಾರಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಜನರಿಗೆ ಸರ್ಕಾರಿ ಸೇವೆಗಳ ವಿತರಣೆಯನ್ನು ಪಾರದರ್ಶಕವಾಗಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಮೂಲಕ ಡಿಜಿಟಲೀಕರಣಗೊಳಿಸುವುದರ ಜೊತೆಗೆ, ಸಂಪೂರ್ಣ ಇ-ಆಡಳಿತವು ಕಡಿಮೆ ಸೌಲಭ್ಯ ಮತ್ತು ಕೆಳವರ್ಗದಲ್ಲಿರುವವರು ಸೇರಿದಂತೆ ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವುದನ್ನು ಖಚಿತಪಡಿಸುತ್ತದೆ. ಆರೋಗ್ಯ, ಶಿಕ್ಷಣ, ಭೂಕಂದಾಯ, ಆಸ್ತಿಗಳ ದಾಖಲಾತಿ, ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಸಾಮಾಜಿಕ ಭದ್ರತಾ ಪಾವತಿಗಳು ಸೇರಿದಂತೆ ಎಲ್ಲಾ ಪ್ರಮುಖ ಡೊಮೇನ್‌ಗಳನ್ನು ಒಳಗೊಂಡಿರುವ ಎಲ್ಲ ಪ್ರಮುಖ ಸೇವೆಗಳ ವಿತರಣೆಯನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಡಿಜಿಟಲೀಕರಣ ಉಪಕ್ರಮದ ಅನುಷ್ಠಾನದ ನೋಡಲ್ ಏಜೆನ್ಸಿಯಾದ ಕೇರಳ ಐಟಿ ಮಿಷನ್ ಸಮಾಜದ ಎಲ್ಲಾ ಸ್ತರದ ಜನರಿಗೆ ಎಲ್ಲಾ ಸೇವೆಗಳು ಸುಲಭವಾಗಿ ಸಿಗುವಂತೆ ಮಾಡಿದೆ ಎಂದು ಸರ್ಕಾರ ಹೇಳಿದೆ.