ಯಾದಾದ್ರಿ(ತೆಲಂಗಾಣ): ಮುಖ್ಯಮಂತ್ರಿ ಕೆಸಿಆರ್ ನೇತೃತ್ವದಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ತನ್ನ ಮೊದಲ ಸಾರ್ವಜನಿಕ ಸಭೆ ನಡೆಸಿ ದೇಶದಕ್ಕೆ ಸಂದೇಶ ರವಾನಿಸಿದೆ. ಹೊಸ ರಾಷ್ಟ್ರೀಯ ಪಕ್ಷ ರಚನೆಯಾದ ನಂತರ ನಡೆಯುತ್ತಿರುವ ಮೊದಲ ಸಾರ್ವಜನಿಕ ಸಭೆ ಇದಾಗಿರುವುದರಿಂದ ಎಲ್ಲರ ಗಮನ ಇದರತ್ತವೇ ನೆಟ್ಟಿತ್ತು. ದೆಹಲಿ, ಪಂಜಾಬ್ ಮತ್ತು ಕೇರಳ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್, ಭಗವಂತ್ ಸಿಂಗ್ ಮಾನ್, ಪಿಣರಾಯಿ ವಿಜಯನ್, ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್, ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜಾ ಮತ್ತು ಅನೇಕ ರಾಷ್ಟ್ರೀಯ ನಾಯಕರು ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸಿದರು.
ಬಿಜೆಪಿ, ಕಾಂಗ್ರೆಸ್ ವಿರುದ್ಧ ಕೆಸಿಆರ್ ಕಿಡಿ:ಖಮ್ಮಂ ನಲ್ಲಿ ನಡೆಯುತ್ತಿರುವ ಬಿಆರ್‌ಎಸ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಸಿಎಂ ಕೆಸಿಆರ್ ಭಾರತವು ಎಲ್ಲಾ ರೀತಿಯಲ್ಲೂ ಸಮೃದ್ಧ ದೇಶವಾಗಿದೆ. ನಮ್ಮ ದೇಶವು ಜಲಸಂಪನ್ಮೂಲ ಮತ್ತು ನೀರಾವರಿ ಭೂಮಿಯಲ್ಲಿ ಮುಂಚೂಣಿಯಲ್ಲಿದೆ. ಆದರೆ, ಕೆನಡಾದಿಂದ ತೊಗರಿ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಎಂದು ಪ್ರಶ್ನಿಸಿದರು. ದೇಶದಲ್ಲಿ 70,000 ಟಿಎಂಸಿ ನೀರು ಲಭ್ಯವಿದೆ. ಆದರೆ, ಕೇವಲ 20,000 ಟಿಎಂಸಿ ನೀರನ್ನು ಮಾತ್ರ ಬಳಸಲಾಗುತ್ತಿದೆ. ದೇಶಕ್ಕೆ ನಿರ್ದಿಷ್ಟ ಗುರಿ ಇಲ್ಲ ಎಂದು ಟೀಕಿಸಿದರು.
ಜಿಂಬಾಬ್ವೆಯಲ್ಲಿ 6,000 ಟಿಎಂಸಿ ಸಾಮರ್ಥ್ಯದ ಜಲಾಶಯವಿದೆ. ಚೀನಾ ಬಳಿ 5,000 ಟಿಎಂಸಿ ಸಾಮರ್ಥ್ಯದ ಜಲಾಶಯವಿದೆ. ಆದರೆ, ದೇಶದಲ್ಲಿ ಒಂದಾದರೂ ಅತಿದೊಡ್ಡ ಜಲಾಶಯವಿದೆಯೇ?" ಎಂದು ಪ್ರಶ್ನಿಸಿದರು. ದೇಶದಲ್ಲಿ ಜಾಗೃತಿ ಮೂಡಿಸಲು ಬಿಆರ್‌ಎಸ್ ಹುಟ್ಟಿಕೊಂಡಿದೆ ಎಂದು ಸಿಎಂ ಕೆಸಿಆರ್ ಹೇಳಿದರು. ಚೆನ್ನೈ ನಗರವು ಬಕೆಟ್ ನೀರಿಗೆ ತನ್ನ ಬೇಡಿಕೆಗಳನ್ನು ಎತ್ತಬೇಕೇ?. ರಾಜ್ಯಗಳ ನಡುವೆ ನೀರಿನ ಯುದ್ಧದ ಅಗತ್ಯವೇನಿದೆ ಎಂದು ಕೆಸಿಆರ್ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ವಿರುದ್ದ ಕೇರಳ ಸಿಎಂ ವಿಜಯನ್ ಟೀಕೆ:ಖಮ್ಮಂನಲ್ಲಿ ನಡೆದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮೊದಲ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದಕೇರಳ ಸಿಎಂ ಪಿಣರಾಯಿ ವಿಜಯನ್, ಕೇಂದ್ರದ ಧೋರಣೆಯಿಂದ ಸಂವಿಧಾನ ಬಿಕ್ಕಟ್ಟು ಎದುರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಈ ವೇಳೆ, ರಾಷ್ಟ್ರ ರಾಜಕಾರಣದ ಕುರಿತು ಹಲವು ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದರು. ತೆಲಂಗಾಣ ಜನರ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರದ ವಿರುದ್ಧ ಹೋರಾಡಲು ಕೆಸಿಆರ್ ಸಿದ್ಧರಿದ್ದಾರೆ ಎಂದರು.
ತೆಲಂಗಾಣವು ಹೋರಾಟಗಳ ತೊಟ್ಟಿಲು. ತೆಲಂಗಾಣ ಸಶಸ್ತ್ರ ಹೋರಾಟವು ಭೂ ಸುಧಾರಣೆಗಳಿಗೆ ಕಾರಣವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರದಲ್ಲಿವೆ. ಕೇಂದ್ರವು ಕಾರ್ಪೊರೇಟ್ ಶಕ್ತಿಗಳನ್ನು ಬೆಂಬಲಿಸುತ್ತಿದೆ. ಕೇಂದ್ರದ ಧೋರಣೆಯಿಂದ ಜಾತ್ಯತೀತತೆ ಅಪಾಯದಲ್ಲಿದೆ. ಕೇಂದ್ರವು ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಒಂದು ರಾಷ್ಟ್ರ- ಒಂದು ತೆರಿಗೆ, ಒಂದು ರಾಷ್ಟ್ರ-ಒಂದು ಚುನಾವಣೆಯಂತಹ ಘೋಷಣೆಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿವೆ ಎಂದು ಕೇರಳ ಸಿಎಂ ವಿಜಯನ್ ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಯಾದಾದ್ರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ:ಖಮ್ಮಂನಲ್ಲಿ ನಡೆದ ಬಹಿರಂಗ ಸಭೆಗೂ ಮುನ್ನ ಸಿಎಂ ಕೆಸಿಆರ್ ಅವರು ಪ್ರಗತಿ ಭವನದಲ್ಲಿ ನಾಯಕರಿಗೆ ಉಪಹಾರ ಕೂಟ ಏರ್ಪಡಿಸಿದ್ದರು. ಉಪಹಾರ ಕೂಟದಲ್ಲಿ ರಾಜ್ಯ ರಾಜಕೀಯ ಮತ್ತು ರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು. ನಾಯಕರು ಉಪಾಹಾರ ಮುಗಿಸಿ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ತೆರಳಿದರು. ಅಲ್ಲಿಂದ ಎರಡು ಹೆಲಿಕಾಪ್ಟರ್‌ಗಳಲ್ಲಿ ಯಾದಾದ್ರಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.