ಮುಂಬೈ (ಮಹಾರಾಷ್ಟ್ರ):ಭಾನುವಾರ ಇಲ್ಲಿ ನಡೆದ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕದ ಸಿನಿ ಶೆಟ್ಟಿ 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022' ಪ್ರಶಸ್ತಿ ಗೆದ್ದರು. ಒಟ್ಟು 31 ಫೈನಲಿಸ್ಟ್‌ಗಳನ್ನು ಹಿಂದಿಕ್ಕಿದ ಅವರು ಅದ್ಭುತ ಸ್ಥಾನಮಾನ ಪಡೆದರು. ರಾಜಸ್ಥಾನದ ರೂಬಲ್ ಶೇಖಾವತ್ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ, ಉತ್ತರ ಪ್ರದೇಶದ ಶಿಂತಾ ಚೌಹಾನ್ ಎರಡನೇ ರನ್ನರ್ ಅಪ್ ಗೌರವಕ್ಕೆ ಪಾತ್ರರಾದರು.
ಪ್ರತಿ ಬಾರಿಯಂತೆ ಈ ವರ್ಷದ ಸ್ಪರ್ಧೆ ಕೂಡಾ ಕಠಿಣ ಮತ್ತು ಆಕರ್ಷಕವಾಗಿತ್ತು. ಆರು ಮಂದಿ ತೀರ್ಪುಗಾರರ ಸಮಿತಿಯು ಸ್ಪರ್ಧಿಗಳ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ವಿಜೇತರನ್ನು ಆಯ್ಕೆ ಮಾಡಿದೆ. ತೀರ್ಪುಗಾರರ ಸಮಿತಿಯಲ್ಲಿ ಮಲೈಕಾ ಅರೋರಾ, ನೇಹಾ ಧೂಪಿಯಾ, ಡಿನೋ ಮೋರಿಯಾ, ರಾಹುಲ್ ಖನ್ನಾ, ರೋಹಿತ್ ಗಾಂಧಿ ಮತ್ತು ಶಮಕ್ ಡಾಬರ್ ಇದ್ದರು.
ಇವರಲ್ಲದೆ, ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕೃತಿ ಸನೋನ್ ಸೇರಿದಂತೆ ಅನೇಕ ನಟಿಯರು ರೆಡ್ ಕಾರ್ಪೆಟ್‌ನಲ್ಲಿ ಮೋಡಿ ಮಾಡಿದರು. ಮಿಸ್ ಇಂಡಿಯಾ ಕಿರೀಟ ಗೆದ್ದು 20 ವರ್ಷಗಳಾದ ಕಾರಣ ನೇಹಾ ಧೂಪಿಯಾ ಅವರಿಗೂ ಈ ಸಂದರ್ಭ ವಿಶೇಷ ಅನುಭವ ನೀಡಿತು. ಅವರ ಯಶಸ್ಸನ್ನೂ ಕಾರ್ಯಕ್ರಮದದಲ್ಲಿ ಸಂಭ್ರಮಿಸಲಾಯಿತು.