ಚೆನ್ನೈ(ತಮಿಳುನಾಡು):ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸದಕ್ಕಾಗಿ ಪ್ರಧಾನಿ ಮೋದಿಯವರನ್ನು ನಟ-ರಾಜಕಾರಣಿ ಕಮಲ್ ಹಾಸನ್ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಜೊತೆಗೆ ಎಲ್ಲಾ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಬಿಟ್ಟು, ತಮ್ಮ ಬಹಿಷ್ಕಾರವನ್ನು ಬದಿಗೊತ್ತಿ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ರಾಷ್ಟ್ರೀಯ ಐಕ್ಯತೆಯ ವಿಶೇಷ ಸಂದರ್ಭವನ್ನಾಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಕಮಲ್ ಟ್ವೀಟ್ ಏನು?: "ನಾನು ನನ್ನ ಪ್ರಧಾನಿಗೆ ಒಂದು ಸರಳ ಪ್ರಶ್ನೆಯನ್ನು ಕೇಳುತ್ತೇನೆ; ನಮ್ಮ ಹೊಸ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಏಕೆ ಭಾಗವಹಿಸಬಾರದು?" ಇದನ್ನು "ದಯವಿಟ್ಟು ದೇಶಕ್ಕೆ ತಿಳಿಸಿ, ರಾಷ್ಟ್ರದ ಮುಖ್ಯಸ್ಥರಾಗಿ ಭಾರತದ ರಾಷ್ಟ್ರಪತಿಗಳು ಈ ಐತಿಹಾಸಿಕ ಸಂದರ್ಭದಲ್ಲಿ ಭಾಗವಾಗದಿರಲು ನನಗೆ ಯಾವುದೇ ಕಾರಣ ಕಾಣುತ್ತಿಲ್ಲ" ಎಂದು ಮಕ್ಕಳ್ ನೀಧ ಮಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಟ್ವಿಟರ್‌ನಲ್ಲಿ ತಮ್ಮ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ವಿರೋಧಿ ಪಕ್ಷಗಳಿಗೂ ಕಮಲ್ ಹಾಸನ್ ಮನವಿ: ಸಂಸತ್ ಭವನದ ಉದ್ಘಾಟನೆ ಕುರಿತು ಭಿನ್ನಾಭಿಪ್ರಾಯ ಎತ್ತಿರುವ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬಹಿಷ್ಕಾರವನ್ನು ಮರುಪರಿಶೀಲಿಸಬೇಕು. ಭಾರತದ ನೂತನ ಸಂಸತ್ ಭವನದಲ್ಲಿ ಅದರ ಎಲ್ಲಾ ಕುಟುಂಬ ಸದಸ್ಯರು ವಾಸಿಸುವ ಅಗತ್ಯವಿದೆ. ಅಸಮಧಾನಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮತ್ತು ಹೊಸ ಸಂಸತ್ತಿನ ಭವನದಲ್ಲಿಯೂ ಪ್ರಸ್ತಾಪಿಸಬಹುದು ಎಂದು ಕಲಮ ಹಾಸನ್ ತಿಳಿಸಿದ್ದಾರೆ.
ಜೊತೆಗೆ, ಇಡೀ ವಿಶ್ವದ ಕಣ್ಣು ನಮ್ಮ ಮೇಲಿದೆ (ಭಾರತ ದೇಶದ). ನಮ್ಮ ಭಿನ್ನಭಿಪ್ರಾಯಗಳಿಗೆ ಒಂದು ದಿನ ಕಾಯಬಹುದು. ಈ ದಿನದ ಕಾರ್ಯಕ್ರಮಕ್ಕಾಗಿ ದೇಶವು ಎದುರು ನೋಡುತ್ತಿದೆ. ಹಾಗಾಗಿ ಭಿನ್ನಭಿಪ್ರಾಯಗಳನ್ನು ಬದಿಗೊತ್ತಿ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ರಾಷ್ಟ್ರೀಯ ಐಕ್ಯತೆಯ ಸಂದರ್ಭವನ್ನಾಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿಗೆ ಸಲಹೆ:ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರನ್ನು ಆಹ್ವಾನಿಸದಿರುವ ಪ್ರಧಾನಿ ಮೋದಿಯವರಿಗೆ ಕಮಲ್ ಹಾಸನ್ ಈ ರೀತಿಯಾಗಿ ತಿಳಿಸಿದ್ದಾರೆ. "ಹೊಸ ಸಂಸತ್ತು ಕೇವಲ ಸಾಮಾನ್ಯ ಕಟ್ಟಡವಲ್ಲ. ಇದು ಅನಾದಿ ಕಾಲದಿಂದಲೂ ಭಾರತೀಯ ಪ್ರಜಾಪ್ರಭುತ್ವದ ನೆಲೆಯಾಗಿದೆ. ಈ ಪ್ರಮಾದವನ್ನು ಸರಿಪಡಿಸುವಂತೆ ನಾನು ಪ್ರಧಾನಿಗೆ ಸಲಹೆ ನೀಡುತ್ತೇನೆ. ಇದು ಇತಿಹಾಸದಲ್ಲಿ ಗಂಭೀರ ದೋಷವಾಗಿ ದಾಖಲಾಗುತ್ತದೆ ಮತ್ತು ಸರಿಪಡಿಸಿದರೆ ರಾಜಕೀಯ ನಾಯಕತ್ವದಲ್ಲಿ ಮೈಲಿಗಲ್ಲು ಆಗುತ್ತದೆ, ”ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಸರ್ಕಾರಕ್ಕೆ ಅಭಿನಂದನೆ: ಈ ಐತಿಹಾಸಿಕ ಸಾಧನೆಗಾಗಿ ನಾನು ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ. ರಾಷ್ಟ್ರೀಯ ಹಿತಾಸಕ್ತಿಯಿಂದ, ಗೌರವಾನ್ವಿತ ರಾಷ್ಟ್ರಪತಿಗಳನ್ನು ಆಹ್ವಾನಿಸದಿರುವ ಮತ್ತು ವಿರೋಧ ಪಕ್ಷಗಳನ್ನು ಪಾಲ್ಗೊಳ್ಳದಿರುವ ಕುರಿತು ನನ್ನ ಅಸಮಧಾನವನ್ನು ಉಳಿಸಿಕೊಂಡು, ಹೊಸ ಸಂಸತ್ತಿನ ಉದ್ಘಾಟನೆಯನ್ನು ದೇಶದ ದೃಷ್ಟಿಯಿಂದ ನಿಮ್ಮೊಂದಿಗೆ ನಾನು ಭಾಗವಹಿಸುತ್ತೇನೆ ಎಂದು ಮಕ್ಕಳ್ ನೀಧ ಮಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಕೇಂದ್ರಕ್ಕೆ ಟಕ್ಕರ್ ನೀಡಿದ್ದಾರೆ.
ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆ: ಪೂಜಾ ಕಾರ್ಯಕ್ರಮದಲ್ಲಿ ಮೋದಿ ಭಾಗಿ LIVE