ಕರ್ನಾಟಕ

karnataka

By ETV Bharat Karnataka Team

Published : Oct 3, 2023, 5:51 PM IST

ETV Bharat / bharat

ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ತಂದೆ ಬನಾರಸಿ ಲಾಲ್ ನಿಧನ: ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗಾಗಿ ದೇಹ ದಾನ

ಹರಿಯಾಣದ ಕರ್ನಲ್​ ಜಿಲ್ಲೆಯಲ್ಲಿ ಭಾರತದ ಮೊದಲ ಮಹಿಳಾ ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರ ತಂದೆ ಬನಾರಸಿ ಲಾಲ್ ಚಾವ್ಲಾ ನಿಧನ ಹೊಂದಿದ್ದಾರೆ.

kalpana-chawlas-father-banarasi-lal-chawla-passes-away-in-karnal-haryana
ಭಾರತದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ತಂದೆ ಬನಾರಸಿ ಲಾಲ್ ನಿಧನ

ಕರ್ನಲ್ (ಹರಿಯಾಣ):ಭಾರತದ ಮೊದಲ ಮಹಿಳಾ ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರ ತಂದೆ ಬನಾರಸಿ ಲಾಲ್ ಚಾವ್ಲಾ (94) ನಿಧನರಾಗಿದ್ದಾರೆ. ಹರಿಯಾಣದ ಕರ್ನಲ್​ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಬನಾರಸಿ ಚಾವ್ಲಾ ಕೊನೆಯುಸಿರೆಳೆದಿದ್ದು, ಅವರು ಸಮಾಜ ಸೇವೆ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿದ್ದರು. ತಮ್ಮ ಇಚ್ಛೆಯಂತೆ ಅವರ ಮೃತದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗಾಗಿ ದಾನ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಸಾವಿನಲ್ಲೂ ಚಾವ್ಲಾ ಮಾದರಿಯಾಗಿದ್ದಾರೆ.

ಬನಾರಸಿ ಲಾಲ್ ಚಾವ್ಲಾ ತಮ್ಮ ಇಡೀ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿಟ್ಟರು. ಬಡ ಹೆಣ್ಣುಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಇತರ ಕೋರ್ಸ್‌ಗಳನ್ನು ಕಲಿಯಲು ಪ್ರೋತ್ಸಾಹಿಸುತ್ತಿದ್ದರು. ಇದಲ್ಲದೇ ಉಚಿತ ಶಿಕ್ಷಣ ನೀಡುವಂತಹ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ಯಾವುದೇ ಸಮಾರಂಭದಲ್ಲಿ ಹೂಗುಚ್ಛಗಳಾಗಲಿ ಅಥವಾ ಉಡುಗೊರೆಗಳನ್ನಾಗಲಿ ಅವರು ಸ್ವೀಕರಿಸುತ್ತಿರಲಿಲ್ಲ. ಅತಂತ್ಯ ಸರಳ ಜೀವನ ನಡೆಸುತ್ತಿದ್ದ ಅವರ ನಿಧನದಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

''ಹರಿಯಾಣದ ಮಗಳು ಕಲ್ಪನಾ ಚಾವ್ಲಾ ಅವರ ತಂದೆ ಬನಾರಸಿ ಲಾಲ್ ಚಾವ್ಲಾ ಅವರ ನಿಧನದ ಬಗ್ಗೆ ಸುದ್ದಿ ಕೇಳಿ ದುಃಖವಾಗಿದೆ. ಅವರು ತಮ್ಮ ಮಗಳಿಗೆ ಕನಸು ಕಾಣಲು ಮತ್ತು ನಕ್ಷತ್ರಗಳನ್ನು ತಲುಪಲು ಸ್ವಾತಂತ್ರ್ಯವನ್ನು ನೀಡಿದ್ದರು. ಇದರಿಂದ ಪ್ರಪಂಚದಾದ್ಯಂತ ಭಾರತದ ವೈಭವ ಹೆಚ್ಚಿತು ಮತ್ತು ಇತರ ಹೆಣ್ಣುಮಕ್ಕಳಿಗೂ ಸ್ಫೂರ್ತಿ ತುಂಬಿತ್ತು. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ದುಃಖತಪ್ತ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಸಿಎಂ ಮನೋಹರ್​ ಲಾಲ್ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಮಗಳ ಹೆಸರಿನ ಕಾಲೇಜಿಗೆ ಮೃತದೇಹ ದಾನ: ಸಾಮಾಜಿಕ ಕಾರ್ಯಕರ್ತರಾಗಿದ್ದ ಬನಾರಸಿ ಲಾಲ್​ ಚಾವ್ಲಾ ಅವರು ತಮ್ಮ ಮಗಳು ಕಲ್ಪನಾ ಚಾವ್ಲಾ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಲು ಎಲ್ಲ ರೀತಿಯಲ್ಲೂ ಬೆಂಬಲವಾಗಿ ನಿಂತಿದ್ದರು. ಇದರಿಂದ 1997ರಲ್ಲಿ ಮಗಳು ಕಲ್ಪನಾ ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸಾಧ್ಯವಾಗಿತ್ತು. ಆದರೆ, 2003ರ ಫೆಬ್ರವರಿ 1ರಂದು ಕೊಲಂಬಿಯಾ ಗನನನೌಕೆ ಪತನಗೊಂಡು ಅವರು ಮೃತಪಟ್ಟಿದ್ದರು.

ಮಗಳ ನಿಧನದ ನಂತರವೂ ಸಮಾಜ ಸೇವೆಯಲ್ಲಿ ತಂದೆ ಬನಾರಸಿ ಲಾಲ್ ತೊಡಗಿದ್ದರು. ಅಷ್ಟೇ ಅಲ್ಲ, ತಮ್ಮ ಸಾವಿನ ನಂತರವೂ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗಾಗಿ ದಾನ ಮಾಡುವಂತೆ ತಮ್ಮ ಆಸೆಯನ್ನು ಉಯಿಲು ಬರೆದಿದ್ದರು. ಅಂತೆಯೇ, ಮಗಳು ಕಲ್ಪನಾ ಚಾವ್ಲಾ ಹೆಸರಿನ ವೈದ್ಯಕೀಯ ಕಾಲೇಜಿಗೆ ಮೃತದೇಹ ಸ್ಥಳಾಂತರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಕಲ್ಪನಾ ಚಾವ್ಲಾ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಜಗದೀಶ್ ಚಂದ್ರ ದುರೇಜಾ ಮಾತನಾಡಿ, ''ಸಮಾಜ ಸೇವಕ ಬನಾರಸಿ ಲಾಲ್ ಚಾವ್ಲಾ ಅವರು ನಮ್ಮ ಸಮಾಜಕ್ಕೆ ತಮ್ಮ ಅತ್ಯಮೂಲ್ಯ ಸೇವೆ ಸಲ್ಲಿಸಿದ್ದಾರೆ. ಈಗ ಅವರ ಸಾವಿನ ನಂತರವೂ ತಮ್ಮ ದೇಹವನ್ನು ಕರ್ನಾಲ್‌ನ ಕಲ್ಪನಾ ಚಾವ್ಲಾ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ. ಇದರಿಂದಾಗಿ ಅವರ ಮರಣದ ನಂತರವೂ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆಗೆ ಬಳಸಲು ನೆರವಾಗಿದ್ದಾರೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕಲ್ಪನಾ ಚಾವ್ಲಾ ಹೆಸರಿನ ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿದ ನಾಸಾ

ABOUT THE AUTHOR

...view details