ನವದೆಹಲಿ:ನ್ಯಾಯಾಂಗವು ಪ್ರಜಾಪ್ರಭುತ್ವದ ಕಾವಲುಗಾರ. ಹಾಡ ಹಗಲೇ ಕಾನೂನಿನ ನಿಯಮಗಳನ್ನು ಮುರಿಯುತ್ತಿರುವುದನ್ನು ಇತ್ತೀಚೆಗೆ ನಾವು ಗಮನಿಸುತ್ತಿದ್ದೇವೆ. ಆದರೆ ನ್ಯಾಯಲಯ ಕಣ್ಣು ಮುಚ್ಚಿಲ್ಲ ಎಂದು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಖಾರವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಭೂಮಿಯಲ್ಲಿರುವ ದತ್ತಿ ಆಸ್ಪತ್ರೆಯ ಗುತ್ತಿಗೆ ಪತ್ರವನ್ನು ರದ್ದುಗೊಳಿಸಿದ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅದರ ಆದೇಶ ಎತ್ತಿಹಿಡಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ, ಈ ಮಹತ್ವದ ಅಭಿಪ್ರಾಯವನ್ನ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದಾರೆ.
ಖೋಸ್ಲಾ ಮೆಡಿಕಲ್ ಇನ್‌ಸ್ಟಿಟ್ಯೂಟ್, ಶಾಲಿಮಾರ್ ಬಾಗ್‌ನಲ್ಲಿ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯನ್ನು ಸ್ಥಾಪಿಸಿತ್ತು. ಸಾರ್ವಜನಿಕ ಭೂಮಿಯಲ್ಲಿ ಸ್ಥಾಪಿಸಿದ್ದರಿಂದ ಅದು ಗುತ್ತಿಗೆಗೆ ಒಳಪಟ್ಟಿತ್ತು. ಆದರೆ 1995 ರಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರವು, ಸಂಸ್ಥೆಯು ಆಸ್ತಿಯನ್ನು ಮೂರನೇ ವ್ಯಕ್ತಿಗಳಿಗೆ ವರ್ಗಾಯಿಸಿದೆ ಮತ್ತು ಅದರಲ್ಲಿ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಗಿದೆ ಹಾಗೂ ಗುತ್ತಿಗೆ ಪತ್ರದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಗುತ್ತಿಗೆ ಪತ್ರವನ್ನು ರದ್ದುಗೊಳಿಸಿ ಆಸ್ತಿಯನ್ನು ಖಾಲಿ ಮಾಡುವಂತೆ ನಿರ್ದೇಶಿಸಿತ್ತು.