ಬೆಂಗಳೂರು:ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು 'ಮೋದಿ ವಿರೋಧಿ' ವಿಪಕ್ಷಗಳ 2ನೇ ಸಭೆ ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಿದೆ. ಕಾಂಗ್ರೆಸ್ ಆಯೋಜಿಸಿರುವ ಈ ಸಭೆ 2 ದಿನ ನಡೆಯಲಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜಿ ಸಂಸದ ರಾಹುಲ್ ಗಾಂಧಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫ್ರೆನ್ಸ್ ಪಕ್ಷದ ಫಾರೂಖ್ ಅಬ್ದುಲ್ಲಾ, ದೆಹಲಿ ಸಿಎಂ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಬೆಂಗಳೂರಿಗೆ ಬಂದಿಳಿದರು.
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸೋನಿಯಾ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಹೂಗುಚ್ಛ ನೀಡಿ ಸ್ವಾಗತಿಸಿದರು. ತಾಜ್ ವೆಸ್ಟ್ಎಂಡ್ನಲ್ಲಿ ಈ ಸಭೆ ನಡೆಯಲಿದ್ದು, 26 ವಿಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಬಿಹಾರದ ಪಾಟ್ನಾದಲ್ಲಿ ಮೊದಲ ವಿಪಕ್ಷಗಳ ಸಭೆ ನಡೆಸಲಾಗಿತ್ತು. ಇದರಲ್ಲಿ 17 ಪಕ್ಷಗಳ ನಾಯಕರು ಭಾಗವಹಿಸಿದ್ದರು.
ಪ್ರಜಾಸತ್ತಾತ್ಮಕತೆ ಉಳಿಸಲು ಒಗ್ಗಟ್ಟು:ಮೋದಿ ವಿರೋಧಿ ಪಕ್ಷಗಳ 2ನೇ ಸಭೆ ಇದಾಗಿದೆ. ದೇಶದ ಪ್ರಜಾಸತ್ತಾತ್ಮಕ ರಚನೆಯನ್ನು ಉಳಿಸಲು ಎಲ್ಲ ರಾಜಕೀಯ ಪಕ್ಷಗಳು ಒಗ್ಗೂಡಿವೆ. ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ರಾಜಕೀಯದಲ್ಲಿ ಭಾರಿ ಬದಲಾವಣೆಗಳು ಕಂಡು ಬಂದಿವೆ. 2024 ರಲ್ಲಿ ವಿಪಕ್ಷಗಳ ಸರ್ಕಾರ ರಚನೆಯಾಗಲಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿಳಿಸಿದರು.
ಬಿಜೆಪಿ ನಿರ್ನಾಮ:ಸಭೆಯಲ್ಲಿ ಭಾಗವಹಿಸಲು ತೆರಳುವ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ದೇಶದ ಜನಸಂಖ್ಯೆಯ 2/3 ರಷ್ಟು ಜನರು ಬಿಜೆಪಿಯನ್ನು ಸೋಲಿಸಲು ಮನಸ್ಸು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಹೀನಾಯವಾಗಿ ಸೋಲಿಸುತ್ತಾರೆ ಎಂದು ಭಾವನೆ ನನ್ನದು. ಈ ಬಗ್ಗೆ ನನಗೆ ಮೂಲಗಳಿಂದ ಮಾಹಿತಿ ಬರುತ್ತಿದೆ. ದೇಶದಲ್ಲಿ ಬಿಜೆಪಿ ನಿರ್ನಾಮವಾಗುವ ಕಾಲ ಬಂದಿದೆ ಎಂದು ಗುಡುಗಿದರು.