ನವದೆಹಲಿ:ಕೋವಿಡ್ ಎರಡನೇ ಅಲೆಗೆ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದಕ್ಕಾಗಿ ನಿರುದ್ಯೋಗ ಸಮಸ್ಯೆ ದುಪ್ಪಟ್ಟಾಗಿದ್ದು, ಯುವ ಜನತೆ ಪರಿತಪಿಸುವಂತಾಗಿದೆ.
ಭಾರತೀಯ ಆರ್ಥಿಕತೆ ಮೇಲ್ವಿಚಾರಣಾ ಕೇಂದ್ರದ ಪ್ರಕಾರ ಮಾರ್ಚ್ನಲ್ಲಿ ಶೇಕಡಾ 6.5 ರಷ್ಟಿದ್ದ ನಿರುದ್ಯೋಗ, ಏಪ್ರಿಲ್ನಲ್ಲಿ ಶೇಕಡಾ 8 ಕ್ಕೆ ಏರಿದೆ.
2021 ರ ಮಾರ್ಚ್ನಲ್ಲಿ ಕೋವಿಡ್ ಭೀತಿಯಿಂದಾಗಿ ಬಹುತೇಕ ಜನರು ಕೆಲಸಕ್ಕೆ ಹಾಜರಾಗಲಿಲ್ಲ. ಇದರಿಂದಾಗಿ ನಿರುದ್ಯೋಗ ಮತ್ತಷ್ಟು ಹೆಚ್ಚಾಯಿತು ಎಂದು ಸಿಎಂಐಇ ಯ ಸಿಇಒ ಮಹೇಶ್ ವ್ಯಾಸ್ ಹೇಳಿದ್ದಾರೆ.
ಕೋವಿಡ್ ನಿಯಂತ್ರಣಕ್ಕೋಸ್ಕರ ಜಾರಿಗೊಳಿಸಿದ ಲಾಕ್ಡೌನ್ ನಿರುದ್ಯೋಗ ಸಮಸ್ಯೆಗೆ ಕಾರಣವಾಗಿದೆ ಎಂದು ಸಿಎಂಐಇ ಅಭಿಪ್ರಾಯಪಟ್ಟಿದೆ. ಮಹಾರಾಷ್ಟ್ರದಲ್ಲಿ ಲಾಕ್ಡೌನ್ಗೂ ಮುನ್ನ ಎಲ್‌ಪಿಆರ್ (Loan Prime Rate) ಶೇಕಡಾ 44.2 ರಿಂದ ಶೇಕಡಾ 40.6 ಕ್ಕೆ ಕುಸಿದಿದೆ. ಮಾರ್ಚ್ನಲ್ಲಿ ಶೇಕಡಾ 37.6 ರಷ್ಟಿದ್ದ ಉದ್ಯೋಗ ದರ ಏಪ್ರಿಲ್ನಲ್ಲಿ 36.8 ಕ್ಕೆ ಇಳಿದಿದೆ.
ಲಾಕ್ಡೌನ್ ಸಮಯದಲ್ಲಿ ಜನರು ಉದ್ಯೋಗ ಹುಡುಕುವುದನ್ನು ನಿಲ್ಲಿಸಿರಬಹುದು. ಆದರೆ, ಉದ್ಯೋಗ ಅರಸುವವರಿಗೆ ಸಮರ್ಪಕ ಕೆಲಸ ಒದಗಿಸಲು ಸಾಧ್ಯವಾಗಿಲ್ಲ. ನಿರುದ್ಯೋಗಕ್ಕೆ ಕೇವಲ ಲಾಕ್ಡೌನ್ ಒಂದೇ ಕಾರಣವಲ್ಲ. ಉದ್ಯೋಗ ಸೃಷ್ಟಿಸದಿದ್ದಕ್ಕೆ ಆರ್ಥಿಕತೆಯೂ ಕಾರಣವಾಗಿರಬಹುದು ಎಂದು ವ್ಯಾಸ್ ತಿಳಿಸಿದ್ದಾರೆ