ರಾಂಚಿ (ಜಾರ್ಖಂಡ್):ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿರುವ ಹೊಸದಾಗಿ ನೇಮಕಗೊಂಡ 29 ಸರ್ಕಾರಿ ವೈದ್ಯರ ವಿರುದ್ಧ ಜಾರ್ಖಂಡ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಇದೇ ಆಗಸ್ಟ್ 15ರೊಳಗಾಗಿ ಗ್ರಾಮೀಣ ಭಾಗದಲ್ಲಿ ಸೇವೆಗೆ ಹಾಜರಾಗದೇ ಇದ್ದಲ್ಲಿ ಅಂತಹವರ ವೈದ್ಯಕೀಯ ನೋಂದಣಿಯನ್ನೇ ತಡೆ ಹಿಡಿಯುವಂತೆ ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ಶಿಫಾರಸು ಮಾಡಲು ತೀರ್ಮಾನಿಸಿದೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಆರೋಗ್ಯ ಇಲಾಖೆಯು ಏಪ್ರಿಲ್ 3ರಂದು 171 ವೈದ್ಯರ ನೇಮಕಾತಿ ಪತ್ರವನ್ನು ಹಸ್ತಾಂತರಿಸಿತ್ತು. ನೇಮಕಾತಿ ಪತ್ರದೊಂದಿಗೆ ಹೊಸದಾಗಿ ನೇಮಕಗೊಂಡ ಎಲ್ಲ ವೈದ್ಯರು ವಿವಿಧ ಆಸ್ಪತ್ರೆಗಳಲ್ಲಿ ತಮ್ಮ ಕೊಡುಗೆ ನೀಡುವಂತೆ ಸೂಚಿಸಲಾಗಿತ್ತು. ಈ 171 ವೈದ್ಯರ ಪೈಕಿ 29 ವೈದ್ಯರು ನೇಮಕಾತಿ ಪತ್ರ ಪಡೆದು ನಾಲ್ಕು ತಿಂಗಳು ಕಳೆದರೂ ಆಯಾ ಆಸ್ಪತ್ರೆಗಳ ಸೇವೆಗೆ ಸೇರಿಲ್ಲ. ಗ್ರಾಮೀಣ ಭಾಗ ಎಂಬ ಕಾರಣಕ್ಕೆ ಅವರು ಸೇವೆ ಸೇರಲು ಹಿಂದೇಟು ಹಾಕುತ್ತಿದ್ದಾರೆ.
ಜಾರ್ಖಂಡ್ ವೈದ್ಯಕೀಯ ಪೂರೈಸಿದವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೂ, ಹೊಸ ವೈದ್ಯರು ಗ್ರಾಮೀಣ ಆಸ್ಪತ್ರೆಗಳಿಗೆ ತೆರಳಲು ಮೀನಮೇಷ ಎಣಿಸುತ್ತಿದ್ದಾರೆ. ಆದ್ದರಿಂದ ಆರೋಗ್ಯ ಇಲಾಖೆಯು ಈಗಾಗಲೇ ಅಂತಹ 29 ಜನರ ಪಟ್ಟಿಯನ್ನು ಸಿದ್ಧಪಡಿಸಿ ಕಠಿಣದ ನಿರ್ಧಾರಕ್ಕೆ ಬಂದಿದೆ. ಇದೇ ವೇಳೆ, ಗ್ರಾಮೀಣ ಆಸ್ಪತ್ರೆಗಳಿಗೆ ತೆರಳುವಂತೆ ಆ ವೈದ್ಯರಿಗೆ ಆಗಸ್ಟ್ 15ರವರೆಗೆ ಕೊನೆಯ ಅವಕಾಶ ನೀಡುವ ತೀರ್ಮಾನ ಮಾಡಿದೆ. ಅದರ ನಂತರವೂ ಯಾವುದೇ ಸೂಕ್ತ ಕಾರಣವಿಲ್ಲದೆ ಸೇವೆಗೆ ಹಾಜರಾಗದ ವೈದ್ಯರನ್ನು ಆರೋಗ್ಯ ಇಲಾಖೆಯಿಂದ ಅಮಾನತುಗೊಳಿಸುವುದ ಜೊತೆಗೆ ವೈದ್ಯಕೀಯ ನೋಂದಣಿ ರದ್ದು ಮಾಡುವಂತೆ ಎಂಸಿಐಗೆ ಶಿಫಾರಸು ಮಾಡಲು ಮುಂದಾಗಿದೆ.