ಮಿರ್ಜಾಪುರ:ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಜಿಲ್ಲೆಯ ಹಲಿಯಾ ಬ್ಲಾಕ್‌ನ ಲಾಹುರಿಯಾದ ಎಂಬ ಕುಗ್ರಾಮಕ್ಕೆ ಕುಡಿಯಲು ನಲ್ಲಿ ನೀರು ಬಂದಿದೆ. ಇಷ್ಟು ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ನಲ್ಲಿಯಿಂದ ನೀರು ಬೀಳುವುದನ್ನು ನೋಡಿದ ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿತ್ತು!
ಈ ಹಿಂದೆ ಗ್ರಾಮಸ್ಥರು ಅಲ್ಲಲ್ಲಿ ಕಾಣುವ ಬುಗ್ಗೆ ಹಾಗೂ ಅಕ್ಕ-ಪಕ್ಕದ ನಗರಕ್ಕೆ ತೆರಳಿ ಟ್ಯಾಂಕರ್ಗಳಿಂದ ನೀರು ತರಬೇಕಾಗಿತ್ತು. ಅಲ್ಲಿಂದ ತಂದ ನೀರನ್ನು ಹಲವು ದಿನಗಳವರೆಗೆ ಸಣ್ಣ-ಸಣ್ಣ ಕ್ಯಾನ್‌ಗಳಲ್ಲಿ ಸಂಗ್ರಹ ಮಾಡಿಕೊಳ್ಳಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದ ಜಲ ಜೀವನ್ ಮಿಷನ್ ಯೋಜನೆಯಡಿ ಈಗ ಮನೆಯಲ್ಲಿ ಅಳವಡಿಸಿರುವ ನಲ್ಲಿಯಿಂದಲೇ ನೀರು ಕಲ್ಪಿಸಲಾಗಿದೆ. ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯಾ ಮಿತ್ತಲ್ ಅವರು ಪೂಜೆ ಮಾಡುವ ಮೂಲಕ ಇತ್ತೀಚೆಗೆ ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡಿದರು.
ಮಧ್ಯಪ್ರದೇಶದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಲಾಹುರಿಯಾದ ಎಂಬ ಗ್ರಾಮವು, ಮಿರ್ಜಾಪುರ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮಸ್ಥರು ಇದಕ್ಕೂ ಮುನ್ನ ಅಲ್ಲಲ್ಲಿ ಕಾಣಸಿಗುವ ಬುಗ್ಗೆಯಿಂದಲೋ ಅಥವಾ ಟ್ಯಾಂಕರ್ನಿಂದಲೋ ನೀರು ತಂದು ತಮ್ಮ ದಾಹ ತೀರಿಸಿಕೊಳ್ಳಬೇಕಿತ್ತು. ಆದರೆ, ಕುಡಿಯುವ ನೀರಿಗಾಗಿ ಅವರು ಪರಿತಪಿಸುತ್ತಿದ್ದ ಕಷ್ಟ ಹೇಳತೀರದಾಗಿತ್ತು. ಕಿಲೋಮೀಟರ್ ವರೆಗೂ ತೆರಳಿ ನೀರು ತರಬೇಕಿತ್ತು. ಅದಕ್ಕಾಗಿ ಸಾಕಷ್ಟು ಹಣ ಮತ್ತು ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಜಲ ಜೀವನ್ ಮಿಷನ್ ಅಡಿಯಲ್ಲಿ ಇತ್ತೀಚೆಗೆ ಗ್ರಾಮಕ್ಕೆ ನಲ್ಲಿ ನೀರು ಬಂದಿದ್ದು ಕಂಡು ಗ್ರಾಮಸ್ಥರಲ್ಲಿ ಸಂತಸದ ವಾತಾವರಣ ಮೂಡಿದೆ.
ಬೆಟ್ಟದ ಮೇಲಿರುವ ಈ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಮೂಲಕ ನೀರು ಪೂರೈಸುವುದು ಸವಾಲಿನ ಕೆಲಸವಾಗಿತ್ತು. ಆದರೆ, ಜಿಲ್ಲಾಧಿಕಾರಿ ದಿವ್ಯಾ ಮಿತ್ತಲ್ ಅವರ ಪ್ರಯತ್ನದಿಂದಾಗಿ ನಲ್ಲಿ ಮೂಲಕ ನೀರು ಪೂರೈಸಲಾಗಿದೆ. ಅಂದುಕೊಂಡಂತೆ ಅಲ್ಪಾವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿದ್ದಾರೆ.