ಜಮ್ಮು ಮತ್ತು ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಶುಕ್ರವಾರ ಮುಂಜಾನೆಯಿಂದಲೇ ಎನ್‌ಕೌಂಟರ್ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಶೋಪಿಯಾನ್ ಜಿಲ್ಲೆಯ ಚೋಟಿಗಮ್ ಪ್ರದೇಶದಲ್ಲಿ ಪ್ರಸ್ತುತ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಪೊಲೀಸ್, ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ" ಎಂದು ಕಾಶ್ಮೀರ ವಲಯ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ :ಶೋಪಿಯಾನ್‌ನಲ್ಲಿ ಭಾರತೀಯ ಸೇನೆ - ಉಗ್ರರ ನಡುವೆ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ
ಇನ್ನೊಂದೆಡೆ, ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹಡಿಗಾಂ ಎಂಬಲ್ಲಿ ಬುಧವಾರ ರಾತ್ರಿಯಿಂದಲೇ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಎನ್‌ಕೌಂಟರ್ ಗುರುವಾರವೂ ಮುಂದುವರೆದಿತ್ತು. ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಸೇನಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಸೇನಾ ತಂಡಗಳು ಶಂಕಿತ ಸ್ಥಳಕ್ಕೆ ತಲುಪಿದ್ದ ವೇಳೆ ಏಕಾಏಕಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಸೇನೆಯೂ ಗುಂಡಿನ ದಾಳಿ ನಡೆಸಿತ್ತು.
ಇದಕ್ಕೂ ಮುನ್ನ ಡಿಸೆಂಬರ್ 22 ರಂದು ಜಮ್ಮುವಿನ ಪೂಂಚ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಮೂವರು ನಾಗರಿಕರು ಕೂಡ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ವರದಿಯಾಗಿತ್ತು. ಅಂಕಿ-ಅಂಶಗಳ ಪ್ರಕಾರ 2023 ರಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ 87 ಕ್ಕೂ ಹೆಚ್ಚು ಉಗ್ರಗಾಮಿಗಳು, 33 ಭದ್ರತಾ ಪಡೆಗಳ ಸಿಬ್ಬಂದಿ ಮತ್ತು 12 ಕ್ಕೂ ಹೆಚ್ಚು ನಾಗರಿಕರು ಸೇರಿದಂತೆ ಉಗ್ರ ದಾಳಿಗಳಲ್ಲಿ 134 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.