ಗುವಾಹಟಿ(ಅಸ್ಸೋಂ): ಇಲ್ಲಿನ ಉಚ್ಚಾಟಿತ ಯುವ ಕಾಂಗ್ರೆಸ್ ನಾಯಕಿ ಅಂಗಿತಾ ದತ್ತಾ ದಾಖಲಿಸಿರುವ ಲೈಂಗಿಕ ಮತ್ತು ಮಾನಸಿಕ ಕಿರುಕುಳ ಪ್ರಕರಣದ ವಿಚಾರಣೆಗಾಗಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ ವಿ ಇಂದು (ಸೋಮವಾರ) ಗುವಾಹಟಿಯಲ್ಲಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಮುಂಜಾನೆ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು. ಅಲ್ಲಿಂದ ಅವರು ಬೆಳಗ್ಗೆ 11 ಗಂಟೆಗೆ ಪನ್‌ಬಜಾರ್ ಮಹಿಳಾ ಪೊಲೀಸ್ ಠಾಣೆಯನ್ನು ತಲುಪಿದರು.
ಈ ವೇಳೆ, ಅವರೊಂದಿಗೆ ಶ್ರೀನಿವಾಸ್ ಅವರ ವಕೀಲರು ಮತ್ತು ಶಾಸಕರಾದ ರಾಕಿಬುಲ್ ಹುಸೇನ್ ಮತ್ತು ರೆಕಿಬುದ್ದೀನ್ ಅಹ್ಮದ್ ಸೇರಿದಂತೆ ಅಸ್ಸೋಂ ಕಾಂಗ್ರೆಸ್ ನಾಯಕರು ಇದ್ದರು. ಪೊಲೀಸ್ ಠಾಣೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ವಿಚಾರಣೆಯ ನಂತರ ಅವರು ನಗರದ ಅಪರಾಧ ತನಿಖಾ ಇಲಾಖೆ (ಸಿಐಡಿ) ಕಚೇರಿಗೆ ತೆರಳಿದರು. ಒಂದು ಗಂಟೆಯ ನಂತರ ಕಚೇರಿಯಿಂದ ಹೊರಬಂದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಈ ವಿಷಯ ನ್ಯಾಯಾಲಯದಲ್ಲಿದೆ ಎಂದು ಹೇಳಿದರು. ಇದೇ ಪ್ರಕರಣದಲ್ಲಿ ಶ್ರೀನಿವಾಸ್‌ಗೆ ಸಿಐಡಿ ಪ್ರತ್ಯೇಕ ನೋಟಿಸ್ ಕೂಡ ಜಾರಿ ಮಾಡಿತ್ತು.
ಪ್ರಕರಣದ ಹಿನ್ನೆಲೆ ಏನು?:ಶ್ರೀನಿವಾಸ್ ಕಳೆದ ಆರು ತಿಂಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಮತ್ತು ತನ್ನ ವಿರುದ್ಧ ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದತ್ತಾ ಏಪ್ರಿಲ್ 20 ರಂದು ದಿಸ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪಕ್ಷದ ಹಿರಿಯ ಪದಾಧಿಕಾರಿಗಳು. ರಾಯ್‌ಪುರದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಸರ್ವಸದಸ್ಯರ ಅಧಿವೇಶನದ ವೇಳೆ ದೈಹಿಕವಾಗಿ ಕಿರುಕುಳ ನೀಡಿದ್ದರು ಮತ್ತು ತಮ್ಮ ವಿರುದ್ಧ ದೂರು ನೀಡಿದರೆ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.