ತಿರುವನಂತಪುರಂ ( ಕೇರಳ) : ಕಮ್ಯುನಿಸ್ಟ್ ಪಾರ್ಟಿ ಮಾರ್ಕ್ಸ್ವಾದಿ (ಸಿಪಿಎಂ) ನೇತೃತ್ವದ ಕೇರಳದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ದೊಡ್ಡ ಸವಾಲು ಎದುರಿಸುತ್ತಿದೆ. ಈ ಹಿಂದಿನ ಯಾವುದೇ ಚುನಾವಣೆಗಳ ಸಂದರ್ಭಗಳಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಎಲ್‌ಡಿಎಫ್ ಇಷ್ಟು ಹೆಣಗಾಡಿದಿಲ್ಲ.
ಸಾಮಾನ್ಯವಾಗಿ, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ತನ್ನ ಅಭ್ಯರ್ಥಿಗಳನ್ನು ಘೋಷಿಸುವ ಮೊದಲು ಎಡ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಘೋಷಿಸುತ್ತವೆ ಮತ್ತು ಕ್ಷೇತ್ರದಲ್ಲಿ ಮೊದಲ ಸುತ್ತಿನ ಪ್ರಚಾರವನ್ನೂ ಪೂರ್ಣಗೊಳಿಸುತ್ತವೆ. ಈ ಬಾರಿ, ಕೇರಳದಲ್ಲಿ ಬಿಜೆಪಿ ಅಖಾಡಕ್ಕೆ ಇಳಿದಿರುವ ಕಾರಣ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಹಾಗಾಗಿ, ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಎಲ್‌ಡಿಎಫ್ ಒಕ್ಕೂಟದೊಳಗೆ ಉಂಟಾಗುವ ಅಸಮಧಾನಗಳು ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
ಈಗಾಗಲೇ ಎಲ್‌ಡಿಎಫ್ ಒಕ್ಕೂಟದ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿದ ನಂತರವೂ ಮಂಜೇಶ್ವರ, ಕುತ್ಯಾಡಿ ಮತ್ತು ಪಿರಾವೋಮ್ ಕ್ಷೇತ್ರಗಳಲ್ಲಿ ಬಿಕ್ಕಟ್ಟು ಮುಂದುವರೆದಿದೆ. ಹೀಗಾಗಿ, ಇದೇ ಮೊದಲ ಬಾರಿಗೆ ಅಭ್ಯರ್ಥಿ ಘೋಷಣೆಯನ್ನು ಮುಂದೂಡುವುದು ಎಲ್ಡಿಎಫ್ಗೆ ಅನಿವಾರ್ಯವಾಗಿದೆ. ಸಿಪಿಎಂ ಜೊತೆಗೆ ಸಿಪಿಐ ಕೂಡ ಮೊದಲ ಹಂತದ ಅಭ್ಯರ್ಥಿಗಳನ್ನು ಘೋಷಿಸುವುದಕ್ಕೆ ತಡೆಯೊಡ್ಡಿವೆ.