ನವದೆಹಲಿ:ಡೀಪ್‌ಫೇಕ್, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಂಡು ನಟಿಯರು ಮತ್ತು ಮಹಿಳೆಯರ ಚಿತ್ರಗಳನ್ನು ಅವಮಾನಕರ ರೀತಿಯಲ್ಲಿ ಬಳಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಕಠಿಣ ನಿರ್ಧಾರಕ್ಕೆ ಬಂದಿದ್ದು, ಸಾಮಾಜಿಕ ಜಾಲತಾಣಗಳು ಇವುಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ಸೂಚಿಸಿದೆ. ಸದ್ಯದಲ್ಲೇ ಜಾಲತಾಣಗಳ ಮುಖ್ಯಸ್ಥರ ಜೊತೆ ಸಭೆ ನಡೆಸಲಾಗುವುದು ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು, ಡೀಪ್‌ಫೇಕ್, ನಕಲಿ ಆಡಿಯೋ ಮತ್ತು ವಿಡಿಯೋಗಳನ್ನು ರಚಿಸಲು ಬಳಸುವ ಕೃತಕ ಬುದ್ಧಿಮತ್ತೆ ಬಳಕೆ ಮತ್ತು ಅವುಗಳ ಮೇಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಎಲ್ಲ ಜಾಲತಾಣಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಿದೆ ಎಂದರು.
ಡೀಪ್‌ಫೇಕ್ ಈಗ ದೊಡ್ಡ ಸಮಸ್ಯೆ ಮಾರ್ಪಟ್ಟಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಿಗೆ ನೋಟಿಸ್ ನೀಡಿದ್ದೇವೆ. ಡೀಪ್‌ಫೇಕ್‌ಗಳನ್ನು ಗುರುತಿಸಲು, ಅವುಗಳನ್ನು ತಾಣದಿಂದ ತೆಗೆದುಹಾಕಲು ಸೂಚಿಸಿದ್ದೇವೆ. ಸಾಮಾಜಿಕ ಮಾಧ್ಯಮಗಳೂ ಇದಕ್ಕೆ ಸ್ಪಂದಿಸಿದೆ. ಕ್ರಮ ಜಾರಿಯಲ್ಲಿದೆ. ಹೆಚ್ಚು ಜಾಗರೂಕತೆ ವಹಿಸಲೂ ಸೂಚಿಸಲಾಗಿದೆ ಎಂದು ತಿಳಿಸಿದರು.
ಸೇಫ್ ಹಾರ್ಬರ್ ವಿನಾಯಿತಿ ರದ್ದು:ನಕಲಿ ವಿಡಿಯೋ, ಆಡಿಯೋಗಳನ್ನು ತಮ್ಮ ತಾಣಗಳಲ್ಲಿ ತೆಗೆದುಹಾಕದ ಸಂಸ್ಥೆಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಸಚಿವರು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ನೀಡಲಾಗಿರುವ 'ಸೇಫ್ ಹಾರ್ಬರ್' ವಿನಾಯಿತಿಯನ್ನು ರದ್ದು ಮಾಡಲಾಗುವುದು. ಹೆಚ್ಚಿನ ಸಾಮಾಜಿಕ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು. ಇನ್ನೊಬ್ಬರ ಮಾನಹಾನಿಗೆ ಸಂಬಂಧಿಸಿದ ವಿಷಯಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಇಲ್ಲವಾದಲ್ಲಿ ಸೇಫ್ ಹಾರ್ಬರ್ ಸೌಲಭ್ಯ ಅನ್ವಯಿಸುವುದಿಲ್ಲ ಎಂದು ಎಚ್ಚರಿಸಿದರು.