ಕರ್ನಾಟಕ

karnataka

ETV Bharat / bharat

ಶುಕ್ರ, ಮಂಗಳನತ್ತ ಇಸ್ರೋ ಮುಂದಿನ ಚಿತ್ತ: ಆದಿತ್ಯ-ಎಲ್1ರ ಯೋಜನಾ ನಿರ್ದೇಶಕಿ ನಿಗರ್ ಶಾಜಿ ಹೇಳಿಕೆ - ಗ್ರಹಗಳ ಕುರಿತ ಇಸ್ರೋ ತನ್ನ ಅನ್ವೇಷಣೆ

ಗಗನಯಾನ ಯೋಜನೆಯ ಭಾಗವಾಗಿ ಇಬ್ಬರು ಮನುಷ್ಯರ ತೂಕಕ್ಕೆ ಸಮಾನವಾದ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾದರೆ, ನಂತರ ರಾಕೆಟ್‌ನೊಂದಿಗೆ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದು ಎಂದು ಇಸ್ರೋ ವಿಜ್ಞಾನಿ ನಿಗರ್​ ಶಾಜಿ ತಿಳಿಸಿದರು.

Aditya L1 Project Director Shaji
ಇಸ್ರೋದ ಆದಿತ್ಯ ಎಲ್1ರ ಯೋಜನಾ ನಿರ್ದೇಶಕಿ ನಿಗರ್​ ಶಾಜಿ

By ETV Bharat Karnataka Team

Published : Oct 22, 2023, 5:10 PM IST

ತಿರುಚ್ಚಿ (ತಮಿಳುನಾಡು):ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಂದಿನ ಮಹತ್ವದ ಯೋಜನೆಗಳ ಬಗ್ಗೆ ವಿಜ್ಞಾನಿ ನಿಗರ್ ಶಾಜಿ ಮಾಹಿತಿ ಹಂಚಿಕೊಂಡಿದ್ದಾರೆ. ಶುಕ್ರ ಮತ್ತು ಮಂಗಳದಂತಹ ಗ್ರಹಗಳ ಕುರಿತು ಇಸ್ರೋ ತನ್ನ ಅನ್ವೇಷಣೆ ಮುಂದುವರಿಸಲಿದೆ ಎಂದು ಸೂರ್ಯನ ಅಧ್ಯಯನ ಬಗ್ಗೆ ಭಾರತದ ಮೊದಲ ಬಾಹ್ಯಾಕಾಶ ಯೋಜನೆಯಾದ ಆದಿತ್ಯ-ಎಲ್1ರ ಯೋಜನಾ ನಿರ್ದೇಶಕಿ ಶಾಜಿ ಹೇಳಿದ್ದಾರೆ.

ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಶನಿವಾರ 'ತಾಂತ್ರಿಕ ಮಹಿಳೆ ವಿಶೇಷ ಪ್ರಶಸ್ತಿ ಮತ್ತು ಇಂಟರ್​ನೆಟ್​ ವಾಣಿಜ್ಯೋದ್ಯಮ ಕೌಶಲ್ಯಗಳ ತರಬೇತಿ' ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪ್ರಸ್ತುತ ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯು ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಯೋಗದ ಭಾಗವಾಗಿದೆ'' ಎಂದರು.

''ಮನುಷ್ಯರು ರಾಕೆಟ್‌ನಲ್ಲಿರುವಾಗ ಬಾಹ್ಯಾಕಾಶದಲ್ಲಿ ಏನಾದರೂ ತೊಂದರೆಯಾದರೆ, ಅದರಿಂದ ಹೇಗೆ ತಪ್ಪಿಸಿಕೊಂಡು ಸುರಕ್ಷಿತವಾಗಿ ಭೂಮಿಗೆ ಮರಳಬೇಕು ಎಂಬುದರ ಕುರಿತು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಹಂತದ ಪ್ರಯೋಗ ಹಾಗೂ ಪರೀಕ್ಷೆಗಳು ನಡೆಯಲಿವೆ. ಇಬ್ಬರು ಮಾನವರ ತೂಕಕ್ಕೆ ಸಮಾನವಾದ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾದರೆ, ನಂತರ ರಾಕೆಟ್‌ನೊಂದಿಗೆ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಬಹುದು'' ಎಂದು ವಿವರಿಸಿದರು.

ಶುಕ್ರ ಮತ್ತು ಮಂಗಳನತ್ತ ಇಸ್ರೋ ನೋಟ: ''ಇಸ್ರೋದ ಮುಂದಿನ ಯೋಜನೆ ಎಂದರೆ ಚಂದ್ರನ ಮೇಲೆ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ಸಂಶೋಧನಾ ಕೇಂದ್ರದಲ್ಲಿ ಪರೀಕ್ಷಿಸುವುದು. ಇದಲ್ಲದೇ, ಸೂರ್ಯ, ಶುಕ್ರ ಮತ್ತು ಮಂಗಳದಂತಹ ಗ್ರಹಗಳ ಕುರಿತು ಹೊಸ ಅನ್ವೇಷಣೆಗಳು ಮುಂದುವರಿಯುತ್ತವೆ'' ಎಂದು ಹೇಳಿದರು.

ಆದಿತ್ಯ-ಎಲ್​1ರ ಕುರಿತು ಮಾತನಾಡಿದ ನಿಗರ್ ಶಾಜಿ, ''ಸೂರ್ಯನು ಹೇಗೆ ಕಾರ್ಯನಿರ್ವಹಿಸುತ್ತಾನೆ ಎಂಬುದರ ಕುರಿತು ಅಧ್ಯಯನ ಮಾಡುವುದು ಆದಿತ್ಯ-ಎಲ್​1 ಯೋಜನೆಯ ಉದ್ದೇಶ. ಸೂರ್ಯನಲ್ಲಿ ವಿವಿಧ ಪ್ರಕ್ರಿಯೆಗಳು ಘಟಿಸುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, 11 ವರ್ಷಗಳಿಗೊಮ್ಮೆ ಸೂರ್ಯನು ತೀರ ಆಕ್ರಮಣಕಾರಿಯಾಗುತ್ತಾನೆ. ಇದು ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಅರಿತುಗೊಳ್ಳಬೇಕಿದೆ. ಹೀಗಾಗಿ ಸೂರ್ಯನನ್ನು ಅಧ್ಯಯನ ಮಾಡಲು ಯೋಜನೆ ಸಹಕಾರಿಯಾಗಲಿದೆ. ಇದರ ಯಶಸ್ಸನ್ನು ತಿಳಿಯಲು ನಾವು ಜನವರಿ ಮೊದಲ ವಾರದವರೆಗೆ ಕಾಯಬೇಕು'' ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಹಸಿರು ಮತ್ತು ಹವಾಮಾನ ಬದಲಾವಣೆ ಆಧಾರಿತ 30 ಮಹಿಳಾ ಸೂಕ್ಷ್ಮ ಉದ್ಯಮಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿಗರ್ ಶಾಜಿ ಅವರೊಂದಿಗೆ ತಿರುಚಿರಪಳ್ಳಿ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜು ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಿಗಳ ಪಾರ್ಕ್​​ನ ಕೌಶಲ್ಯ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಆರ್‌.ಎಂ.ಪಿ.ಜಾವಕರ್, ತಮಿಳುನಾಡು ಪ್ರತಿಷ್ಠಾನದ ಅಧ್ಯಕ್ಷ ರಾಜಾರತ್ನಂ, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಬಿಂದು ಬಾಲಕೃಷ್ಣನ್ ಉಪಸ್ಥಿತರಿದ್ದರು.

ಇದನ್ನೂ ಓದಿ:Gaganyaan TV D1 Mission success: ಗಗನಯಾನದ ಮೊದಲ ಪರೀಕಾರ್ಥ ಯಶಸ್ವಿ.. ಸಂತಸ ಹಂಚಿಕೊಂಡ ಇಸ್ರೋ ಅಧ್ಯಕ್ಷ

ABOUT THE AUTHOR

...view details