ಮುಂಬೈ: ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಓರ್ವ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆಯ (ಐಎಸ್ಐ) ಶಂಕಿತ ಏಜೆಂಟ್ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಈ ಬಗ್ಗೆ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಂಕಿತ ಉಗ್ರರ ಬಗ್ಗೆ ದೊರೆತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಜುಹು ಭಯೋತ್ಪಾದನಾ ನಿಗ್ರಹದಳ ಮತ್ತು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಮುಂಬೈನ ಜೋಗೇಶ್ವರ್ ಪ್ರದೇಶದಲ್ಲಿ ಭಾನುವಾರ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಅರ್ಮಾನ್ ಸಯ್ಯದ್ (62) ಮತ್ತು ಮೊಹಮ್ಮದ್ ಸಲ್ಮಾನ್ ಸಿದ್ದಿಕಿ (24) ಎಂಬಿಬ್ಬರನ್ನು ಬಂಧಿಸಲಾಗಿದೆ.
ಅರ್ಮಾನ್ ಸಯ್ಯದ್ ಶಂಕಿತ ಐಎಸ್ಐ ಏಜೆಂಟ್ ಆಗಿದ್ದು, ಈತ ಮೊಹಮ್ಮದ್ ಸಲ್ಮಾನ್ ಸಿದ್ದಿಕಿಯನ್ನು ಐಎಸ್ಐಗೆ ನೇಮಕ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಇಬ್ಬರೂ ಮತ್ತೊಬ್ಬ ಶಂಕಿತ ಐಎಸ್ಐ ಏಜೆಂಟ್ ಮೊಹಮ್ಮದ್ ರಾಯೀಸ್ ಎಂಬಾತನಿಗೆ ಸಹಾಯ ಮಾಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಂಕಿತ ಐಎಸ್ಐ ಏಜೆಂಟ್ ರಾಯಿಸ್ ಗೋಂಡಾ ನಿವಾಸಿ. ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಗೆ ಸೋರಿಕೆ ಮಾಡಿದ್ದಕ್ಕೆ ಈತನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರದ ದಳದ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಈತ ನೀಡಿದ ಮಾಹಿತಿ ಮೇರೆಗೆ ಮುಂಬೈನ ಜೋಗೇಶ್ವರ್ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಯ್ಯದ್ ಮತ್ತು ಸಿದ್ದಿಕಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಉತ್ತರಪ್ರದೇಶ ಎಟಿಎಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.