ನವದೆಹಲಿ: ಉಕ್ರೇನ್- ರಷ್ಯಾ ಉದ್ವಿಗ್ನತೆ ಕಾರಣದಿಂದಾಗಿ ವಿವಿಧ ರಾಷ್ಟ್ರಗಳ ಆರ್ಥಿಕತೆಯ ಮೇಲೆಯೂ ಪರಿಣಾಮ ಉಂಟಾಗಿದ್ದು, ಷೇರುಪೇಟೆಗಳು ತೀವ್ರ ಕುಸಿತ ಕಂಡಿವೆ. ಭಾರತದ ಮೇಲೆಯೂ ಕೂಡಾ ರಷ್ಯಾ-ಉಕ್ರೇನ್ ಉದ್ವಿಗ್ನತೆ ವಿಚಾರ ಪರಿಣಾಮ ಬೀರಿದೆ. ಬಿಎಸ್ಇ ಪಟ್ಟಿಯ ಕಂಪನಿಯ ಹೂಡಿಕೆದಾರರ ಸಂಪತ್ತು ಕೇವಲ ಒಂದು ಗಂಟೆ ಅವಧಿಯಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕುಸಿದಿದೆ.
ವಿವಿಧ ಕಂಪನಿಗಳ ಮೇಲೆ ಹೂಡಿಕೆ ಮಾಡುವ ಹೂಡಿಕೆಯದಾರರೂ ರಷ್ಯಾ-ಉಕ್ರೇನ್ ಪರಿಸ್ಥಿತಿಯಿಂದಾಗಿ ಭಯಭೀತರಾಗಿದ್ದಾರೆ. ಮುಂಬೈ ಷೇರುಪೇಟೆಯ ಪಟ್ಟಿಯಲ್ಲಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವು ಬೆಳಗ್ಗೆ 10.15ರ ಸುಮಾರಿಗೆ 2,47,46,960.48 ಕೋಟಿ ರೂಪಾಯಿಗೆ ಕುಸಿದಿದೆ. ಮಾರುಕಟ್ಟೆ ಬಂಡವಾಳ ಎಂದರೆ ಒಂದು ಕಂಪನಿಯ ಒಟ್ಟು ಷೇರುಗಳ ಮೌಲ್ಯವಾಗಿದೆ. ಈ ಷೇರುಗಳ ಮೌಲ್ಯ 2,47,46,960.48 ಕೋಟಿ ರೂಪಾಯಿಗೆ ಕುಸಿದಿದೆ.
ಬುಧವಾರದ ಮುಂಬೈ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಮುಕ್ತಾಯವಾದಾಗ ವಹಿವಾಟಿನ ಮುಕ್ತಾಯಕ್ಕೆ ಮಾರುಕಟ್ಟೆ ಬಂಡವಾಳವು 2,55,68,668.33 ಕೋಟಿ ರೂಪಾಯಿ ಇತ್ತು. ಈಗ 8.2 ಲಕ್ಷ ಕೋಟಿ ರೂಪಾಯಿ ಕುಸಿತವನ್ನು ಕಂಡಿದೆ.
ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ ನಂತರ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿಯೂ ಭಾರಿ ಏರಿಳಿತ ಸಂಭವಿಸಿತ್ತು. ಇದರೊಂದಿಗೆ ದೇಶದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಮುಂಜಾನೆ ಶೇಕಡಾ 3ಕ್ಕಿಂತ ಹೆಚ್ಚು ಕುಸಿತ ಕಂಡಿವೆ.
ಇದನ್ನೂ ಓದಿ:ರಷ್ಯಾ ಆಕ್ರಮಣ ಶುರು: ಉಕ್ರೇನ್ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ- ವಿಡಿಯೋ
ಬಿಎಸ್ಇ ಸೆನ್ಸೆಕ್ಸ್ 1,718.99 ಪಾಯಿಂಟ್‌ಗಳು ಅಥವಾ ಶೇಕಡಾ 3ರಷ್ಟು ಕುಸಿದು 55,513.07 ಪಾಯಿಂಟ್ಗಳಿಗೆ ಇಳಿಕೆ ಕಂಡಿದೆ. ನಿಫ್ಟಿ 508.85 ಪಾಯಿಂಟ್ ಅಥವಾ ಶೇಕಡಾ 2.98ರಷ್ಟು ಕುಸಿದು 16,554.40 ಅಂಕಗಳಿಗೆ ತಲುಪಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ್ದಾರೆ. ರಷ್ಯಾದ ನಾಗರಿಕರನ್ನು ಈ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತಿರುವುದಾಗಿ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಾಂತವಾಗುವವರೆಗೆ ಕೆಲವು ರಾಷ್ಟ್ರಗಳ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಇದರೊಂದಿಗೆ ಅಮೆರಿಕ ಮಿತ್ರ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಿರುವ ಕಾರಣದಿಂದಾಗಿ ಆರ್ಥಿಕತೆಗೆ ಮತ್ತಷ್ಟು ಹೊಡೆತ ಬೀಳಲಿದೆ.