ನವದೆಹಲಿ:"ಹೆಣ್ಣಿಂದಲೇ ಜಗವೆಲ್ಲ, ಹೆಣ್ಣಿಲ್ಲದೇ ಏನಿಲ್ಲ" ಎಂಬ ಸಾಲು ಅದೆಷ್ಟು ಅರ್ಥಗರ್ಭಿತವೋ ಅಷ್ಟೇ ಪ್ರಸ್ತುತ. ಪ್ರತಿವರ್ಷದಂತೆ ಈ ವರ್ಷವೂ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ. ಸ್ತ್ರೀತ್ವವನ್ನು, ಸ್ತೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಸಂಭ್ರಮಿಸುವ ದಿನವಾಗಿದೆ.
ವಿಶ್ವದಲ್ಲಿ ಅನೇಕ ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ, ಅವರನ್ನು ಸನ್ಮಾನಿಸುವ ದಿನವಿಂದು. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನೂ ನೀಡಬೇಕಿದೆ. ಮಹಿಳಾ ದಿನದ ವಿಶೇಷತೆ ಮತ್ತು ಅದರ ಇತಿಹಾಸ ಮತ್ತು ಈ ವರ್ಷದ ಥೀಮ್ ಏನೆಂಬುದನ್ನು ತಿಳಿಯೋಣ.
ಇತಿಹಾಸ ಅರಿಯೋಣ:ವಿಶ್ವಸಂಸ್ಥೆಯು ಮಹಿಳೆಯರನ್ನು ಗೌರವಿಸುವ ಮತ್ತು ಅವರ ಕೊಡುಗೆಯನ್ನು ಅಭಿನಂದಿಸಲು 1975 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿತು. 1977 ರಲ್ಲಿ ಸಾಮಾನ್ಯ ಸಭೆಯು ಮಹಿಳೆಯರ ಹಕ್ಕುಗಳ ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್ ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿವರ್ಷ ಒಂದು ಥೀಮ್ನೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಈ ದಿನದ ಆಚರಣೆಯ ಮೂಲಕ ಮಹಿಳೆಯರ ಸಾಧನೆ ಮತ್ತು ಕೊಡುಗೆಯನ್ನು ಜಗತ್ತಿಗೇ ಸಾರಿ ಹೇಳುವ ಮೂಲಕ ಲಿಂಗಸಮಾನತೆ ಎತ್ತಿಹಿಡಿಯುವುದು ಇದರ ಹಿಂದಿನ ಉದ್ದೇಶ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಹೊತ್ತು ನೀಡುವುದೂ ಪ್ರಮುಖ ಅಂಶವಾಗಿದೆ. ಅಪ್ರತಿಮ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಮೂಲಕ ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಣೆ ನೀಡುವುದಾಗಿದೆ. ಪ್ರತಿ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುವ ಮೂಲಕ ಶಾಂತಿ, ಸುರಕ್ಷತೆ, ಸಾಕ್ಷರತೆಯ ಸಾಧನೆಯಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಪುರುಷ ಸಮಾನವಾಗಿ ಬಿಂಬಿಸುವುದಾಗಿದೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದಕ್ಕೂ ಈ ದಿನ ಸಹಕಾರಿಯಾಗಿದೆ.
2023 ರ ಮಹಿಳಾ ದಿನದ ಥೀಮ್:ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕಾಗಿ ವಿಶ್ವಸಂಸ್ಥೆ ನವೀನವಾದ ಥೀಮ್ ರೂಪಿಸಿದೆ. "ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ" ಎಂಬ ಘೋಷಣೆ ಹೊರಡಿಸಿದೆ.
ನಾರಿಶಕ್ತಿ ಪುರಸ್ಕಾರ:ಕೇಂದ್ರ ಸರ್ಕಾರ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಅವರಿಗೆ "ನಾರಿ ಶಕ್ತಿ ಪುರಸ್ಕಾರ" ನೀಡುತ್ತಿದೆ.