ಇಂದೋರ್(ಮಧ್ಯಪ್ರದೇಶ): ಇಂದೋರ್ ನಗರದ ಪ್ರಸಿದ್ಧ ಖಜರಾನಾ ಗಣೇಶ ದೇವಸ್ಥಾನ ಸಂಕೀರ್ಣದಲ್ಲಿರುವ ಕೇವಲ 69.50 ಚದರ ಅಡಿ ವಿಸ್ತೀರ್ಣದ ಪೂಜಾ ಸಾಮಗ್ರಿ ಮಾರಾಟ ಮಳಿಗೆಯು 1.72 ಕೋಟಿ ರೂ.ಗಳ ಬೃಹತ್ ಬಿಡ್ಗೆ ಹರಾಜಾಗಿದೆ. 30 ವರ್ಷಗಳ ಗುತ್ತಿಗೆಗೆ ಈ ಮಳಿಗೆಗೆ ಬಿಡ್ ಕರೆಯಲಾಗಿತ್ತು. ಇದರ ಮೂಲ ಬೆಲೆ ರೂ. 30 ಲಕ್ಷ ನಿಗದಿ ಮಾಡಲಾಗಿತ್ತು.
ಆದರೆ ಮಳಿಗೆ 1.72 ಕೋಟಿ ರೂಗಳ ಮೂಲ ದರಕ್ಕೆ ಹರಾಜಾಗಿದೆ. ಈ ಮೂಲಕ ದೇಶದಲ್ಲಿ ವಾಣಿಜ್ಯ ಆಸ್ತಿಗೆ ಸಲ್ಲಿಕೆಯಾದ ಅತ್ಯಧಿಕ ದರದ ಬಿಡ್ಗಳಲ್ಲಿ ಇದೂ ಒಂದಾಗಿದೆ ಎಂದು ದೇಗುಲದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ವಾಣಿಜ್ಯ ಮಳಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸ್ಥಳೀಯ ನಿವಾಸಿಯೊಬ್ಬರು 1.72 ಕೋಟಿ ರೂ.ಗಳನ್ನು ಪಾವತಿಸಲು ಮುಂದಾಗಿದ್ದು, '1-ಎ' ಮಳಿಗೆಯನ್ನು 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ತೆಗೆದುಕೊಂಡಿದ್ದಾರೆ. ಇದರ ವಾಸ್ತವಿಕ ವಿಸ್ತೀರ್ಣ 69.50 ಚದರ ಅಡಿ ಅಂದರೆ ಪ್ರತಿ ಚದರ ಅಡಿಗೆ 2.47 ಲಕ್ಷ ರೂ. ಎಂದು ಅವರು ಮಾಹಿತಿ ನೀಡಿದ್ದಾರೆ.