ನವದೆಹಲಿ:ಭಾರತವು ನಡೆಸುತ್ತಿರುವ ಕಾನೂನುಬದ್ಧ ತೈಲ ಆಮದು-ರಫ್ತು ವಹಿವಾಟುಗಳನ್ನು ರಾಜಕೀಯಗೊಳಿಸಬಾರದು ಮತ್ತು ತೈಲದಲ್ಲಿ ಸ್ವಾವಲಂಬಿಯಾಗಿರುವ ದೇಶಗಳು ಅಥವಾ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳೂ ರಷ್ಯಾದ ಮೇಲಿನ ವ್ಯಾಪಾರದ ನಿರ್ಬಂಧವನ್ನು ದೃಢವಾಗಿ ಸಮರ್ಥಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಶುಕ್ರವಾರ ಹೇಳಿವೆ.
ಉಕ್ರೇನ್ನ ಮೇಲೆ ಮಿಲಿಟರಿ ಕಾರ್ಯಾಚರಣೆಯಿಂದಾಗಿ ಅನೇಕ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಿವೆ. ಈ ವೇಳೆ ರಿಯಾಯಿತಿ ದರದಲ್ಲಿ ಭಾರತ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಹಲವಾರು ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರದ ಮೂಲದಿಂದ ಇಂಥದ್ದೊಂದು ಹೇಳಿಕೆ ಹೊರಬಿದ್ದಿದೆ.
ರಷ್ಯಾ ಭಾರತಕ್ಕೆ ಕಚ್ಚಾ ತೈಲದ ಪೂರೈಕೆದಾರ. ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸಲು ನಾವು ಮುಕ್ತವಾಗಿದ್ದೇವೆ ಎಂಬ ನಿಲುವನ್ನು ಭಾರತ ಹೊಂದಿದೆ. ಈ ನಿಲುವಿನ ವಿರುದ್ಧ ಅನೇಕ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರಿ ಮೂಲಗಳ ಹೇಳಿಕೆ ಮಹತ್ವ ಪಡೆದಿದೆ.
ಉಕ್ರೇನ್ ಸಂಘರ್ಷದ ನಂತರ ತೈಲ ಬೆಲೆಯಲ್ಲಿ ಸಾಕಷ್ಟು ಏರಿಕೆ ಕಂಡಿದ್ದು, ಸ್ವಾಭಾವಿಕವಾಗಿ ಭಾರತದ ಮೇಲೆಯೂ ಒತ್ತಡ ಹೆಚ್ಚಾಗಿದೆ. ಆದ್ದರಿಂದ ಕಡಿಮೆ ಬೆಲೆಗಳಲ್ಲಿ ಭಾರತ ತೈಲವನ್ನು ಕೊಂಡುಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಎಲ್ಲಾ ತೈಲ ಉತ್ಪಾದಕರಿಂದ ಇಂಥಹ ರಿಯಾಯಿತಿಗಳನ್ನು ನಾವು ಸ್ವಾಗತಿಸುತ್ತೇವೆ. ಭಾರತದ ತೈಲ ವ್ಯಾಪಾರಿಗಳೂ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉತ್ತಮ ಆಯ್ಕೆಗಳನ್ನು ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸರ್ಕಾರಿ ಮೂಲ ಸ್ಪಷ್ಟೀಕರಿಸಿದೆ.
ಇದನ್ನೂ ಓದಿ:ಉಕ್ರೇನ್ ಅಮೆರಿಕ ರಕ್ಷಣಾ ಇಲಾಖೆಯ ಅತಿದೊಡ್ಡ ಜೈವಿಕ ಪ್ರಯೋಗಾಲಯ: ರಷ್ಯಾ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಗುರುವಾರವಷ್ಟೇ ಮಾತನಾಡಿ, ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತೇವೆ. ಭಾರತವು ಎಲ್ಲಾ ಸಮಯದಲ್ಲೂ ತೈಲದ ಪ್ರಮುಖ ಆಮದುದಾರನಾಗಿ ಉತ್ತಮ ಆಯ್ಕೆಗಳನ್ನ ನಿರೀಕ್ಷಿಸುತ್ತದೆ ಎಂದಿದ್ದರು.
ನಮಗೆ ಹೆಚ್ಚಿನ ತೈಲದ ಅಗತ್ಯತೆ ಇದ್ದು, ವಿವಿಧ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತಕ್ಕೆ ರಷ್ಯಾ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರವಲ್ಲ ಎಂದು ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಈಗಿನ ಅಂಕಿ ಅಂಶಗಳಂತೆ ಸೌದಿ ಅರೇಬಿಯಾ, ಅಮೆರಿಕ, ಯುಎಇ, ಇರಾನ್ ರಾಷ್ಟ್ರಗಳಿಂದ ಹೆಚ್ಚಿನ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿವೆ.