ಹರಿದ್ವಾರ: ಭಾರತದ ಮೊದಲ ಹಿಮಾಲಯನ್ ಏರ್ ಸಫಾರಿ ಪ್ರಾರಂಭಿಸುವ ಮೂಲಕ ಉತ್ತರಾಖಂಡ ಸರ್ಕಾರ ಪ್ರವಾಸೋದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ. ಗೈರೋಕಾಪ್ಟರ್ಸ್ ಎಂದು ಕರೆಯಲ್ಪಡುವ ಚಿಕ್ಕ ಗಾತ್ರದ ಚುರುಕಾಗಿ ಹಾರಾಡುವ ವಿಮಾನದ ಮೊದಲ ಪ್ರಾಯೋಗಿಕ ಹಾರಾಟವು ಹರಿದ್ವಾರದ ಬೈರಾಗಿ ಶಿಬಿರದಲ್ಲಿ ಶನಿವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ.
ರಜಾಸ್ ಏರೋಸ್ಪೋರ್ಟ್ಸ್ ಮತ್ತು ಅಡ್ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಗೈರೋಕಾಪ್ಟರ್ ಸಫಾರಿಯನ್ನು ಆರಂಭಿಸಲಿದೆ.
ಗೈರೋಕಾಪ್ಟರ್ ಬಳಸಿ ಹಿಮಾಲಯನ್ ಏರ್ ಸಫಾರಿ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಮಂಡಳಿಯ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರ್ನಲ್ ಅಶ್ವಿನಿ ಪುಂಡಿರ್ ಹೇಳಿದರು. ಈ ಯೋಜನೆಯ ಭಾಗವಾಗಿ, ಪ್ರವಾಸಿಗರು ಗೈರೋಕಾಪ್ಟರ್ನಲ್ಲಿ ಕುಳಿತು ಹಿಮಾಲಯದ ಶಿಖರಗಳ ಮೇಲೆ ಹಾರಾಡುತ್ತ ನದಿ ಬೆಟ್ಟಗಳ ನೈಸರ್ಗಿಕ ಸೌಂದರ್ಯ ಸವಿಯಬಹುದು.
ಈ ಅತ್ಯಾಧುನಿಕ ಗೈರೋಕಾಪ್ಟರ್ಗಳನ್ನು ಜರ್ಮನಿಯಿಂದ ಖರೀದಿಸಲಾಗಿದ್ದು, ಆರಂಭದಲ್ಲಿ ಪರಿಣಿತ ತರಬೇತಿ ಪಡೆದ ಜರ್ಮನ್ ಪೈಲಟ್ಗಳೇ ಇವನ್ನು ಚಾಲನೆ ಮಾಡಲಿದ್ದಾರೆ. ಇದಕ್ಕಾಗಿ ನಾಗರಿಕ ವಿಮಾನಯಾನ ಇಲಾಖೆ ಮತ್ತು ಜಿಲ್ಲಾ ಅಧಿಕಾರಿಗಳ ಸಹಯೋಗದೊಂದಿಗೆ ವಿವಿಧ ರಮಣೀಯ ಸ್ಥಳಗಳಲ್ಲಿ ವಿಶೇಷ ಏರ್ ಸ್ಟ್ರಿಪ್ಗಳನ್ನು (ವಾಯುಮಾರ್ಗ) ಅಭಿವೃದ್ಧಿಪಡಿಸುವ ಯೋಜನೆಗಳು ನಡೆಯುತ್ತಿವೆ.
ಬ್ರೇಕ್ಫಾಸ್ಟ್ ಟೂರಿಸಂ (breakfast tourism) ಹೆಸರಿನಲ್ಲಿ ಉತ್ತರಾಖಂಡ್ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರನ್ನು ಆಕರ್ಷಿಸಲು ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಅದರ ಭಾಗವಾಗಿ ಈಗ ಗೈರೋಕಾಪ್ಟರ್ ಸಫಾರಿಯನ್ನು ಪರಿಚಯಿಸುತ್ತಿದೆ. ಇಡೀ ಪ್ರವಾಸವನ್ನು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿದೆ. ಮೂರರಿಂದ ನಾಲ್ಕು ಗಂಟೆಗಳವರೆಗೆ ಗೈರೋಕಾಪ್ಟರ್ ಸಫಾರಿಯ ಅವಧಿ ಇರಲಿದ್ದು, ಪ್ರವಾಸಿಗರು ಈ ಸಮಯದಲ್ಲಿ ಸಾಕಷ್ಟು ಸುಂದರ ತಾಣಗಳನ್ನು ಆಕಾಶದಿಂದ ವೀಕ್ಷಿಸಬಹುದು.
"ಈ ಗೈರೋಕಾಪ್ಟರ್ ಸಫಾರಿಯು ರಮಣೀಯ ಪ್ರವಾಸಕ್ಕಿಂತ ಹೆಚ್ಚಿನದಾಗಿದೆ. ಇದು ಪ್ರವಾಸಿಗರನ್ನು ಈವರೆಗೆ ಬಹಳಷ್ಟು ಜನರಿಗೆ ತಿಳಿಯದ ದೂರದ ನೈಸರ್ಗಿಕ ಪ್ರೇಕ್ಷಣಿಯ ಸ್ಥಳಗಳೊಂದಿಗೆ ಸಂಪರ್ಕಿಸುವ ಸೇತುವೆಯಾಗಿದೆ. ಇದು ಗುಪ್ತ ತಾಣಗಳನ್ನು ಅನ್ವೇಷಿಸುವ ಅನನ್ಯ ಅವಕಾಶ ನೀಡಲಿದೆ. ಹಿಂದೆಂದಿಗಿಂತಲೂ ರಮಣೀಯವಾಗಿ ಆಕಾಶದಿಂದ ಹಿಮಾಲಯದ ಸೌಂದರ್ಯ ಕಣ್ತುಂಬಿಕೊಳ್ಳಲು ಸಿದ್ಧರಾಗಿ" ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ. ಗೈರೋಕಾಪ್ಟರ್ ಗಳನ್ನು ಸುಲಭವಾಗಿ ಸಾಗಿಸಬಹುದು ಮತ್ತು ಬೇಗನೆ ಇವನ್ನು ಜೋಡಿಸಬಹುದು. ಒಂದು ಹೆಲಿಕಾಪ್ಟರ್ ಬೆಲೆಯ ಶೇ 10ರಷ್ಟು ಬೆಲೆಯಲ್ಲಿ ಗೈರೋಕಾಪ್ಟರ್ ಖರೀದಿ ಮತ್ತು ನಿರ್ವಹಣೆ ಮಾಡಬಹುದು.
ಇದನ್ನೂ ಓದಿ : 2 ವಾರಗಳಲ್ಲಿ 20 ಸಾವಿರ ಕೋಟಿ ರೂ. ಹೂಡಿಕೆ ಮಾಡಿದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು