ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಮುಂಚಿನ ಕೊನೆಯ ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ ಕ್ರೊಯೇಶಿಯಾದ ಓಸಿಯೆಕ್ನಲ್ಲಿ ಜೂನ್ 22 ರಿಂದ ಜುಲೈ 3 ರವರೆಗೆ ನಡೆಯಲಿದೆ. ಈ ಚಾಂಪಿಯನ್ಶಿಪ್ನಲ್ಲಿ ಭಾರತೀಯ ಶೂಟರ್ಗಳೂ ಪಾಲ್ಗೊಳ್ಳಲಿದ್ದು, ಇವರೆಲ್ಲರೂ ಈ ಬಾರಿ ಯುರೋಪಿಯನ್ ದೇಶವೊಂದರಲ್ಲಿ ತರಬೇತಿ ಪಡೆಯಲಿದ್ದಾರೆ.
ಇದಕ್ಕೂ ಮುಂಚಿನ ಶೂಟಿಂಗ್ ವಿಶ್ವಕಪ್ ಚಾಂಪಿಯನ್ಶಿಪ್ ಅಜರಬೈಜಾನ್ ದೇಶದ ಬಾಕು ಸಿಟಿಯಲ್ಲಿ ಜೂನ್ 22 ರಿಂದ ಜುಲೈ 3 ರವರೆಗೆ ನಡೆಯಬೇಕಿತ್ತು. ಆದರೆ, ಆ ದೇಶದಲ್ಲಿ ಕೋವಿಡ್ ಬಿಕ್ಕಟ್ಟು ಉಲ್ಬಣಿಸಿದ ಕಾರಣ ಅದನ್ನು ರದ್ದುಗೊಳಿಸಲಾಗಿದ್ದು, ಈಗ ಅದು ಜಂಟಿ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಶಿಪ್ ಆಗಿ ಕ್ರೊಯೇಶಿಯಾದಲ್ಲಿ ನಡೆಯಲಿದೆ.
"ಟೋಕಿಯೊ ಒಲಿಂಪಿಕ್ ಮುಂಚಿನ ಇಂಟರನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ವಿಶ್ವಕಪ್ ಚಾಂಪಿಯನ್ಶಿಪ್ಗೆ ಕ್ರೊಯೇಶಿಯಾದ ಓಸಿಯೆಕ್ ಆತಿಥ್ಯ ವಹಿಸಲಿದೆ.ಜೂನ್ 22 ರಿಂದ ಜುಲೈ 3 ರವರೆಗೆ ಪಂದ್ಯಾವಳಿ ನಡೆಯಲಿದೆ. ರೈಫಲ್, ಪಿಸ್ತೂಲ್ ಮತ್ತು ಶಾಟ್ಗನ್ ವೈಯಕ್ತಿಕ, ಮಿಶ್ರ ತಂಡ ಹಾಗೂ ತಂಡಗಳ ಹಂತಗಳಲ್ಲಿ ನಡೆಯಲಿವೆ." ಎಂದು ಐಎಸ್ಎಸ್ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಒಲಿಂಪಿಕ್ಗೆ ನಿಯೋಜಿತ 15 ಸದಸ್ಯರ ಭಾರತದ ತಂಡವು ಮೇ 11 ರಂದು ಕ್ರೊಯೇಶಿಯಾದ ಝಗ್ರೆಬ್ ಸಿಟಿಗೆ ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದು, ಮೇ 20 ರಿಂದ ಜೂನ್ 6 ರವರೆಗೆ ನಡೆಯಲಿರುವ ಯುರೋಪಿಯನ್ ಚಾಂಪಿಯನ್ಶಿಪ್ನಲ್ಲಿ ಮೊದಲು ಭಾಗವಹಿಸಲಿದೆ. ಕ್ರೊಯೇಶಿಯಾದಲ್ಲಿನ ಎಲ್ಲ ಪಂದ್ಯಾವಳಿಗಳ ನಂತರ ಭಾರತದ ತಂಡವು ಅಲ್ಲಿಂದ ನೇರವಾಗಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಟೋಕಿಯೊಗೆ ತೆರಳಲಿದೆ.