ನವದೆಹಲಿ:ಅಫ್ಘಾನಿಸ್ತಾನದಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಬ್ರಿಟನ್ ಕಳವಳ ವ್ಯಕ್ತಪಡಿಸಿದ್ದು, ಹೆಣ್ಣುಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ನೀಡಬೇಕೆಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಜಂಟಿಯಾಗಿ ಒತ್ತಾಯಿಸಿದ್ದಾರೆ. ಈ ಕುರಿತು ವಿದೇಶಾಂಗ ಇಲಾಖೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ತಾಲಿಬಾನ್ ಸರ್ಕಾರ ಅಲ್ಲಿನ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ಶಿಕ್ಷಣ ಪಡೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದ್ದು, ಅಫ್ಘಾನಿಸ್ತಾನದ ಜನರಿಗೆ ವೈದ್ಯಕೀಯ ಮತ್ತು ಆಹಾರ ಧಾನ್ಯಗಳ ನೆರವು ನೀಡುವಲ್ಲಿ ಭಾರತ ವಹಿಸಿದ ಪಾತ್ರವನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶ್ಲಾಘಿಸಿದ್ದಾರೆ. ಇದರ ಜೊತೆಗೆ ಆಫ್ಘನ್ ಪ್ರದೇಶವನ್ನು ಭಯೋತ್ಪಾದಕ ಕೃತ್ಯಗಳಿಗೆ ಆಶ್ರಯತಾಣವಾಗಿ ಬಳಸಲು ಮತ್ತು ಉಗ್ರ ಕೃತ್ಯಗಳಿಗೆ ಹಣಕಾಸು ಒದಗಿಸಲು ಬಳಸದಂತೆ ಎರಡು ರಾಷ್ಟ್ರಗಳು ಒತ್ತಾಯಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.