ನವದೆಹಲಿ: ಪೂರ್ವ ಲಖಾಡ್‌ನ ಗಡಿಯಲ್ಲಿ ಸಂಘರ್ಷವನ್ನು ಸಂಪೂರ್ಣವಾಗಿ ನಿಲ್ಲಿಸುವ ಗುರಿ ಹೊಂದಿರುವ ಭಾರತ ಮತ್ತು ಚೀನಾ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾಗಿವೆ. ಉಭಯ ದೇಶಗಳ ನಡುವಿನ 14ನೇ ಸುತ್ತಿನ ಕಾರ್ಪ್ಸ್ ಕಮಾಂಡ್ ಮಟ್ಟದ ಮಾತುಕತೆ ಈ ತಿಂಗಳ ದ್ವಿತೀಯಾರ್ಧದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
14ನೇ ಸುತ್ತಿನ ಮಾತುಕತೆಗೆ ಚೀನಾ ಆಹ್ವಾನ ನೀಡಿದೆ. ಡಿಸೆಂಬರ್ ದ್ವಿತೀಯಾರ್ಧದಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ. 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧದ ವಿಜಯ ಸೂಚಿಸುವ ಸುವರ್ಣ ಮಹೋತ್ಸವದಲ್ಲಿ ಸೈನಿಕರು ಭಾಗವಹಿಸಿದ್ದಾರೆ. ಇದು ಡಿಸೆಂಬರ್ 16ರ ವರೆಗೆ ನಡೆಯಲಿದ್ದು, ಆ ಬಳಿಕ ಮಾತುಕತೆಗೆ ಸಮಯ ನಿಗದಿ ಮಾಡಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ಸಮಸ್ಯೆ ಬಗೆಹರಿಸಲು ಇದುವರೆಗೆ ಸೇನಾ ಹಿರಿಯ ಅಧಿಕಾರಿಗಳ ಮಟ್ಟದ 13 ಸುತ್ತಿನ ಮಾತುಕತೆ ನಡೆದಿದೆ. ಪ್ಯಾಂಗಾಂಗ್ ಲೇಕ್ ಘರ್ಷಣೆ ಸ್ಥಳಗಳಿಂದ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವಿಕೆ, ಗೋಗ್ರಾ ಹೈಟ್ಸ್ ಪ್ರದೇಶದಿಂದ ಸೇನಾ ಪಡೆಗಳ ಹಿಂಪಡೆಯುವಿಕೆ ಪೂರ್ಣಗೊಂಡಿದೆ. ಹಾಟ್ ಸ್ಪ್ರಿಂಗ್ಸ್‌ನಲ್ಲಿ ಹಿಂತೆಗೆದುಕೊಳ್ಳುವ ಕುರಿತು ಉಭಯ ದೇಶಗಳ ನಡುವಿನ ಬಿಕ್ಕಟ್ಟು ಮುಂದುವರೆದಿದೆ.