ನವದೆಹಲಿ: ಇಂದು ಭಾರತಕ್ಕೆ 74 ನೇ ಗಣರಾಜ್ಯೋತ್ಸವದ ಸಂಭ್ರಮ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದಂತೆ ಜನರ ಸಹಭಾಗಿತ್ವದಲ್ಲಿ ಉತ್ಸವ ಕಳೆಗಟ್ಟಲಿದೆ. ಗಣತಂತ್ರ ಆಚರಣೆಗೆ ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ಬುಡಕಟ್ಟು ಜನಾಂಗದ ಮೊದಲ ಮತ್ತು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡುವರು.
ಕಾರ್ಯಕ್ರಮ ಹೀಗಿರಲಿದೆ..:ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಬುಧವಾರವೇ ಭಾರತಕ್ಕೆ ಆಗಮಿಸಿದ್ದು, ಅವರಿಗೆ ಪ್ರಧಾನಿ ಮೋದಿ ಆತ್ಮೀಯ ಸ್ವಾಗತ ನೀಡಿದ್ದರು. ಇಂದು ಬೆಳಗ್ಗೆ 10.30ಕ್ಕೆ ಗಣರಾಜ್ಯೋತ್ಸವ ಪೆರೇಡ್ ಆರಂಭವಾಗಲಿದೆ. ದೇಶದ ಸೇನೆಯ ಸಾಮರ್ಥ್ಯ ಪ್ರದರ್ಶನ ಮತ್ತು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಜರುಗಲಿದೆ. ಇದಕ್ಕೂ ಮುನ್ನ ಪ್ರಧಾನಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ದೇಶಕ್ಕಾಗಿ ಮಡಿದ ವೀರಯೋಧರಿಗೆ ಮಾಲಾರ್ಪಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಇದಾದ ಬಳಿಕ ಪ್ರಧಾನಿ ಸೇರಿದಂತೆ ಇತರೆ ಗಣ್ಯರು ಪರೇಡ್ ವೀಕ್ಷಿಸಲು ಕರ್ತವ್ಯ ಪಥ್ ಮೂಲಕ ಮುಖ್ಯ ವೇದಿಕೆಗೆ ತೆರಳಲಿದ್ದಾರೆ.
ನಿಯಮದಂತೆ, ರಾಷ್ಟಗೀತೆಯ ನಂತರ ವಿಜೃಂಭಣೆಯ 21 ಗನ್ ಸೆಲ್ಯೂಟ್ನೊಂದಿಗೆ ರಾಷ್ಟ್ರಧ್ವಜಾರೋಹಣ ನಡೆಯಲಿದೆ. ರಾಷ್ಟ್ರಪತಿ ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಪರೇಡ್ ಆರಂಭವಾಗುತ್ತದೆ. ಅತಿ ವಿಶಿಷ್ಟ ಸೇವಾ ಪದಕ ಪಡೆದ ಪರೇಡ್ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇತೃತ್ವದಲ್ಲಿ ಪರೇಡ್ ನಡೆಯಲಿದೆ. ಮೇಜರ್ ಜನರಲ್ ಭವನೀಶ್ ಕುಮಾರ್ ಪೆರೇಡ್ನ ಸೆಕೆಂಡ್ ಇನ್ ಕಮಾಂಡ್ ಆಗಿರುತ್ತಾರೆ. ಅತ್ಯುನ್ನತ ಶೌರ್ಯ ಪ್ರಶಸ್ತಿ ಸೇರಿದಂತೆ ಪರಮವೀರ ಚಕ್ರ ಮತ್ತು ಅಶೋಕ ಚಕ್ರ ವಿಜೇತರು ಇವರನ್ನು ಹಿಂಬಾಲಿಸಲಿದ್ದಾರೆ. ಇದೇ ಮೊದಲ ಬಾರಿಗೆ ಈಜಿಪ್ಟ್ ದೇಶದ 144 ಸೈನಿಕ ಸದಸ್ಯರ ತಂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಇದರ ನೇತೃತ್ವವನ್ನು ಕರ್ನಲ್ ಮಹಮೂದ್ ಮೊಹಮ್ಮದ್ ಅಬ್ದೆಲ್ ಫತ್ತಾಹ್ ಎಲ್ ಖರಾಸಾವಿ ವಹಿಸುವರು.