ಇಂಡಿಯಾ ಕೂಟದ ಸಮನ್ವಯ ಸಮಿತಿ ಸಭೆ ಮುಕ್ತಾಯ ನವದೆಹಲಿ:ಎನ್‌ಡಿಎ ಕೂಟದ ವಿರುದ್ಧ ಹೋರಾಡಲು ಪ್ರತಿಪಕ್ಷಗಳು ಸೇರಿಕೊಂಡು ಹೊಸದಾಗಿ ರಚಿಸಿಕೊಂಡಿರುವ ಇಂಡಿಯಾ ಕೂಟವು ನವದೆಹಲಿಯಲ್ಲಿ ಇಂದು ನಡೆಸಿದ ಮೊದಲ ಸಮನ್ವಯ ಸಭೆ ಮುಗಿದಿದೆ. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮನೆಯಲ್ಲಿ ಈ ಸಭೆ ನಡೆಸಲಾಗಿತ್ತು. ಎಲ್ಲ ನಾಯಕರು ಪವಾರ್ ನಿವಾಸದಿಂದ ತೆರಳಿದರು.
ಈ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕೆಲ ನಾಯಕರು, ಇಂಡಿಯಾದ ಮುಂದಿನ ಸಭೆಯನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಸೀಟು ಹಂಚಿಕೆ, ಹೋರಾಟದ ತಂತ್ರ ಸೇರಿದಂತೆ ಹಲವು ವಿಚಾರಗಳು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಮಧ್ಯಪ್ರದೇಶದಲ್ಲಿ ಮುಂದಿನ ಇಂಡಿಯಾ ಸಭೆ:ಭಾರತ ಮೈತ್ರಿಕೂಟದ ಸಮನ್ವಯ ಸಮಿತಿ ಸಭೆಯ ಕುರಿತು ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಮನ್ವಯ ಸಮಿತಿಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸದಸ್ಯ ಪಕ್ಷಗಳು ಮಾತುಕತೆ ನಡೆಸಿ ಶೀಘ್ರದಲ್ಲೇ ಈ ಬಗ್ಗೆ ಒಂದು ಇತ್ಯರ್ಥಕ್ಕೆ ಬರಲಿವೆ. ಕೂಟದ 4ನೇ ಸಭೆಯನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಮಾತನಾಡಿ, ಇಂಡಿಯಾ ಕೂಟದ ಸದಸ್ಯರು ಈಗಾಗಲೇ ಹೊಂದಿರುವ ಸ್ಥಾನಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ನಾವು ಬಿಜೆಪಿ, ಎನ್‌ಡಿಎ ಹೊಂದಿರುವ ಸ್ಥಾನಗಳ ಮೇಲೆ ನಿಗಾ ವಹಿಸಬೇಕು. ಅಲ್ಲದೇ, ಎರಡೂ ಮೈತ್ರಿಕೂಟಗಳ ಭಾಗವಾಗಿರದ ಪಕ್ಷಗಳ ಬಗ್ಗೆಯೂ ಕಣ್ಣಿಡಬೇಕಿದೆ ಎಂದಿದ್ದಾರೆ.
ಸೀಟು ಹಂಚಿಕೆ ಕುರಿತು ಚರ್ಚೆ:ಸೀಟು ಹಂಚಿಕೆ ಕುರಿತು ಚರ್ಚೆ ನಡೆದಿದೆ. ಪಕ್ಷಗಳು ಅದನ್ನು ಶೀಘ್ರದಲ್ಲೇ ಅಂತಿಮಗೊಳಿಸಲಿವೆ ಎಂದು ಜೆಡಿಯು ನಾಯಕ ಸಂಜಯ್ ಝಾ ಹೇಳಿದರೆ, ಇದು ಸಮನ್ವಯ ಸಮಿತಿಯ ಮೊದಲ ಸಭೆಯಾಗಿದೆ. ಹಲವಾರು ವಿಷಯಗಳ ಮೇಲೆ ಚರ್ಚೆ ನಡೆದಿದೆ. ಸದಸ್ಯ ಪಕ್ಷಗಳು ಮುಂಬರುವ ಚುನಾವಣೆಗಳಿಗೆ ರಾಜ್ಯ ಮಟ್ಟದಲ್ಲಿ ಸೀಟು ಹಂಚಿಕೆಯ ಮಾತುಕತೆಯನ್ನು ಶೀಘ್ರದಲ್ಲೇ ಇತ್ಯರ್ಥ ಮಾಡಿಕೊಳ್ಳಲಿವೆ ಎಂದು ಸಿಪಿಐ ನಾಯಕ ಡಿ ರಾಜಾ ಹೇಳಿದರು.
ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಿ ಶೀಘ್ರವೇ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಗಿದೆ. ಭೋಪಾಲ್‌ನಲ್ಲಿ ಜಂಟಿ ಸಾರ್ವಜನಿಕ ಸಭೆ ನಡೆಸಲಾಗುವುದು. ಜಾತಿ ಗಣತಿ ವಿಷಯವನ್ನೂ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ ಎಂದು ಆಪ್ ಸಂಸದ ರಾಘವ್ ಚಡ್ಡಾ ತಿಳಿಸಿದರು.
ಇದನ್ನೂ ಓದಿ:ಎದ್ದು ನಿಂತು ಗೌರವ ನೀಡದ್ದಕ್ಕೆ ಬಾಲಕನಿಗೆ ಶಿಕ್ಷಕಿ ಕಪಾಳಮೋಕ್ಷ.. ವಿದ್ಯಾರ್ಥಿ ಮೆದುಳಿಗೆ ಗಾಯವಾಗಿ ಐಸಿಯುನಲ್ಲಿ ಚಿಕಿತ್ಸೆ!