ಕರ್ನಾಟಕ

karnataka

ETV Bharat / bharat

ಭಾರತ-ಬಾಂಗ್ಲಾ ರೈಲ್ವೇ ಸಂಪರ್ಕ ಯೋಜನೆ ಉದ್ಘಾಟನೆ: ಪ್ರಯಾಣದ ಅವಧಿ 30 ಗಂಟೆಯಿಂದ 10ಕ್ಕೆ ಇಳಿಕೆ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್​ ಹಸೀನಾ ಬುಧವಾರ ಚಾಲನೆ ನೀಡಿದ್ದಾರೆ.

inauguration-of-akhaura-agartala-rail-link-a-historic-moment-pm-modi
ಅಖೌರ-ಅಗರ್ತಲಾ ರೈಲ್ವೇ ಸಂಪರ್ಕ ಯೋಜನೆ ಉದ್ಘಾಟನೆ : ಪ್ರಯಾಣದ ಅವಧಿ 30 ಗಂಟೆಯಿಂದ 10ಕ್ಕೆ ಇಳಿಕೆ

By ANI

Published : Nov 2, 2023, 10:25 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್​ ಹಸೀನಾ ಅವರು ಜಂಟಿಯಾಗಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಅಖೌರ-ಅಗರ್ತಲಾ ರೈಲ್ವೇ ಸಂಪರ್ಕ ಯೋಜನೆಯನ್ನು ಉದ್ಘಾಟಿಸಿದರು. ಶೇಖ್​ ಹಸೀನಾ ಅವರೊಂದಿಗೆ ವಿಡಿಯೋ ಕಾನ್ಪರೆನ್ಸ್​ನಲ್ಲಿ ವಿವಿಧ ಯೋಜನೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಮೋದಿ, ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.

ಈ ರೈಲ್ವೇ ಸಂಪರ್ಕ ಯೋಜನೆಯು ಬಾಂಗ್ಲಾದೇಶ ಮತ್ತು ಭಾರತದ ಈಶಾನ್ಯ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ಮೊದಲ ಯೋಜನೆ. ತ್ರಿಪುರಾ ಬಾಂಗ್ಲಾದೇಶದೊಂದಿಗೆ ನಿಕಟ ಸಂಬಂಧ ಹೊಂದಿದೆ. ಕಳೆದ 9 ವರ್ಷಗಳಿಂದ ಭಾರತ-ಬಾಂಗ್ಲಾದೇಶ ನಡುವಿನ ಆಂತರಿಕ ವ್ಯಾಪಾರ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.

ಅಖೌರ-ಅಗರ್ತಲಾ ರೈಲ್ವೇ ಸಂಪರ್ಕ ಯೋಜನೆಗೆ ಚಾಲನೆ ನೀಡಿರುವುದು ಒಂದು ಐತಿಹಾಸಿಕ ಕ್ಷಣ. ಇದರ ಜೊತೆಗೆ ಎರಡನೇ ಮೈತ್ರಿ ಥರ್ಮಲ್ ​ಪ್ರಾಜೆಕ್ಟ್​ ಅನ್ನು ಉದ್ಘಾಟನೆ ಮಾಡಲಾಗಿದೆ. ಅಲ್ಲದೆ ಎರಡು ದೇಶಗಳ ನಡುವಿನ ಶಾಂತಿ ಮತ್ತು ಸುರಕ್ಷತಾ ದೃಷ್ಟಿಯಿಂದ ಭೂ ಗಡಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದವು ಕಳೆದ ಕೆಲವು ದಶಕಗಳಿಂದ ನೆನೆಗುದಿಗೆ ಬಿದ್ದಿತ್ತು ಎಂದರು.

ಕಳೆದ 9 ವರ್ಷಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ವಿವಿಧ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆ. ಢಾಕಾ, ಶಿಲ್ಲಾಂಗ್​, ಅಗರ್ತಲಾ, ಗುವಾಹಟಿ, ಕೊಲ್ಕತ್ತಾ ನಡುವೆ ಮೂರು ಬಸ್​ ಸೇವೆಗಳನ್ನು ಆರಂಭಿಸಲಾಗಿದೆ. ಹೊಸ ಮೂರು ರೈಲ್ವೇ ಸಂಪರ್ಕವನ್ನು ಕಲ್ಪಿಸಲಾಗಿದೆ. 2020ರಿಂದ ಬಾಂಗ್ಲಾ ಮತ್ತು ಭಾರತದ ನಡುವೆ ಕಂಟೇನರ್​ ಮತ್ತು ಗೂಡ್ಸ್​ ರೈಲುಗಳು ಸಂಚಾರ ನಡೆಸುತ್ತಿವೆ. ವಿಶ್ವದ ಅತಿ ದೊಡ್ಡ ಹಡಗು ಗಂಗಾ ವಿಲಾಸ್​ ಕ್ರೂಸ್​ನ್ನು ಪ್ರಾರಂಭಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಭಾರತ ಮತ್ತು ಬಾಂಗ್ಲಾದೇಶ ನಡುವೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿರುವುದು ಸಂತೋಷವಾಗಿದೆ. ನಮ್ಮ ಸಂಬಂಧಗಳು ಇನ್ನೂ ಉನ್ನತ ಸ್ಥಾನ ತಲುಪುತ್ತದೆ. ಕಳೆದ 9 ವರ್ಷಗಳಲ್ಲಿ ದಶಕಗಳ ಕಾಲ ಸಾಧ್ಯವಾಗದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಸಬ್ಕಾ ಸಾತ್​ ಸಬ್ಕಾ ವಿಕಾಸ್​ ಮಂತ್ರದೊಂದಿಗೆ, ನೆರೆಯ ದೇಶ ಬಾಂಗ್ಲಾದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ ಸುಮಾರು 10 ಬಿಲಿಯನ್​ ಡಾಲರ್​ಗಳಷ್ಟು ನೆರವು ನೀಡಲಾಗಿದೆ. ಬಾಂಗ್ಲಾದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತೇವೆ ಎಂದರು.

ಅಖೌರಾ - ಅಗರ್ತಲಾ ರೈಲು ಸಂಪರ್ಕ ಯೋಜನೆಯು ಬಾಂಗ್ಲಾದೇಶ ಮತ್ತು ಭಾರತದ ಈಶಾನ್ಯ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಉಭಯರಾಷ್ಟ್ರಗಳ ವಾಣಿಜ್ಯ ವ್ಯವಹಾರಕ್ಕೆ ಅನುಕೂಲವಾಗಲಿದೆ. ಅಲ್ಲದೆ ಈ ಯೋಜನೆಯಿಂದ ಅಗರ್ತಲಾ ಮತ್ತು ಕೊಲ್ಕತ್ತಾ ನಡುವಿನ ಪ್ರಯಾಣದ ಅವಧಿ 31 ಗಂಟೆಯಿಂದ 10 ಗಂಟೆಗೆ ಇಳಿಕೆ ಆಗಲಿದೆ. ಇದರಿಂದ ಪ್ರವಾಸೋದ್ಯಮ, ವ್ಯಾಪಾರಕ್ಕೆ ಹೆಚ್ಚಿನ ಅವಕಾಶ ದೊರೆಯಲಿದೆ.

ಇದನ್ನೂ ಓದಿ:ಶೇ 97ರಷ್ಟು 2,000 ಮುಖಬೆಲೆಯ ನೋಟುಗಳು ವಾಪಸ್​: ಗ್ರಾಹಕರಿಗೆ ಆರ್​ಬಿಐ ನೀಡಿದ ಸಿಹಿಸುದ್ದಿ ಏನು?

ABOUT THE AUTHOR

...view details