ಕರ್ನಾಟಕ

karnataka

ETV Bharat / bharat

2021 Rewind : ರಾಜ್ಯ ಹೈಕೋರ್ಟ್​ನೊಳಗೆ 2021ರಲ್ಲಾದ ಮಹತ್ವದ ಬದಲಾವಣೆಗಳು - ರಾಜ್ಯದ ನ್ಯಾಯಾಂಗದಲ್ಲಿ ಆದ ಮಹತ್ವದ ಘಟನೆಗಳ ವರದಿ

2021ರಲ್ಲಿ ರಾಜ್ಯ ಹೈಕೋರ್ಟ್​ನ ಕಾರ್ಯಕಲಾಪಗಳಲ್ಲಿ ಆದ ಬದಲಾವಣೆಗಳು, ನ್ಯಾಯಮೂರ್ತಿಗಳ ಪದೋನ್ನತಿ, ವರ್ಗಾವಣೆ, ನಿವೃತ್ತಿ, ಅಗಲಿಕೆ ಸೇರಿದಂತೆ ರಾಜ್ಯ ನ್ಯಾಯಾಂಗದಲ್ಲಿ ಆದ ಮಹತ್ವದ ಘಟನೆಗಳ ಸಂಕ್ಷಿಪ್ತ ವರದಿ ಇಲ್ಲಿದೆ..

High Court
ಹೈಕೋರ್ಟ್

By

Published : Dec 31, 2021, 5:38 PM IST

ಬೆಂಗಳೂರು :ಕೋವಿಡ್ ಸೋಂಕಿನ ಭಯಕ್ಕೆ ದೇಶದ ಹಲವು ರಾಜ್ಯಗಳಲ್ಲಿ ನ್ಯಾಯಾಲಯಗಳು ತಮ್ಮ ಕಲಾಪಗಳಿಗೆ ಮಿತಿ ಹೇರಿಕೊಂಡಿದ್ದವು. ಆದರೆ, ರಾಜ್ಯ ಹೈಕೋರ್ಟ್ ಇದಕ್ಕೆ ಹೊರತಾಗಿ ಕಾರ್ಯ ನಿರ್ವಹಿಸಿತಲ್ಲದೇ, 2021ರಲ್ಲಿ ಹಲವು ಮಹತ್ವದ ಹೆಜ್ಜೆ ಗುರುತುಗಳನ್ನು ಮೂಡಿಸಿತು.

2021ರಲ್ಲಿ ರಾಜ್ಯ ಹೈಕೋರ್ಟ್​ನ ಕಾರ್ಯಕಲಾಪಗಳಲ್ಲಿ ಆದ ಬದಲಾವಣೆಗಳು, ನ್ಯಾಯಮೂರ್ತಿಗಳ ಪದೋನ್ನತಿ, ವರ್ಗಾವಣೆ, ನಿವೃತ್ತಿ, ಅಗಲಿಕೆ ಸೇರಿದಂತೆ ರಾಜ್ಯ ನ್ಯಾಯಾಂಗದಲ್ಲಿ ಆದ ಮಹತ್ವದ ಘಟನೆಗಳ ಸಂಕ್ಷಿಪ್ತ ವರದಿ ಇಲ್ಲಿದೆ.

  1. ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ ಹೆಗ್ಗಳಿಕೆ : ಕೋವಿಡ್ ಅಡಚಣೆಗಳ ನಡುವೆಯೂ ವರ್ಚುಯಲ್ ಕಲಾಪಗಳ ಮೂಲಕ ಇಡೀ ವರ್ಷ ನಿರಂತರವಾಗಿ ನ್ಯಾಯದಾನ ಮಾಡಿರುವ ರಾಜ್ಯ ಹೈಕೋರ್ಟ್, ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ 2ನೇ ಸ್ಥಾನಕ್ಕೆ ಏರಿದೆ. ಮದ್ರಾಸ್ ಹೈಕೋರ್ಟ್ ಮೊದಲ ಸ್ಥಾನದಲ್ಲಿದೆ.
  2. ಹೈಕೋರ್ಟ್​ನ ಎಲ್ಲ ಪೀಠಗಳಲ್ಲೂ ವರ್ಚುಯಲ್ ಕಲಾಪ :ಕೋವಿಡ್ ಹಿನ್ನೆಲೆ ಸೋಂಕು ತಡೆಗಟ್ಟಲು ಹಾಗೂ ವಕೀಲರ ಕಾರ್ಯ ನಿರ್ವಹಣೆ ಸುಲಭಗೊಳಿಸುವ ನಿಟ್ಟಿನಲ್ಲಿ ಹೈಕೋರ್ಟ್​ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಪೀಠ ಹಾಗೂ ಧಾರವಾಡ ಪೀಠಗಳಲ್ಲಿ ವರ್ಚುಯಲ್ ಕಲಾಪಕ್ಕೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಯಿತು. ರಿಜಿಸ್ಟ್ರಾರ್ ಜನರಲ್ ಟಿ.ಜಿ ಶಿವಶಂಕರೇಗೌಡರ ನೇತೃತ್ವದಲ್ಲಿ ಕಂಪ್ಯೂಟರ್ ವಿಭಾಗದ ಸಿಬ್ಬಂದಿ ದೇಶದಲ್ಲೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಉತ್ಕೃಷ್ಟ ಗುಣಮಟ್ಟದ ವರ್ಚುಯಲ್ ಕೋರ್ಟ್ ವ್ಯವಸ್ಥೆ ರೂಪಿಸಿದ್ದು, ಸುಪ್ರೀಂ ಮೆಚ್ಚುಗೆಗೂ ಕಾರಣವಾಯಿತು.
  3. ಪದೋನ್ನತಿ ಪಡೆದ ನ್ಯಾಯಮೂರ್ತಿಗಳು : ನಿರ್ಭೀತ ಹಾಗೂ ವಸ್ತುನಿಷ್ಠ ತೀರ್ಪುಗಳ ಮೂಲಕ ರಾಜ್ಯ ನ್ಯಾಯಾಂಗ ಇತಿಹಾಸದಲ್ಲಿ ಹೆಜ್ಜೆ ಗುರುತು ಮೂಡಿಸಿದ, ಜನಮನ್ನಣೆ ಗಳಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಹಾಗೂ ನ್ಯಾಯಮೂರ್ತಿ ಬಿ.ವಿ ನಾಗರತ್ನ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ವರ್ಗಾವಣೆಗೊಂಡರು. 2027ರಲ್ಲಿ ನ್ಯಾ. ಬಿ.ವಿ ನಾಗರತ್ನ ಸುಪ್ರೀಂ ಸಿಜೆಯಾಗಲಿದ್ದಾರೆ. ಇನ್ನು ಪ್ರತಿ ಲೋಕ ಅದಾಲತ್​​ನಲ್ಲಿಯೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿದ ಹೆಗ್ಗಳಿಕೆ ಹೊಂದಿರುವ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆಯಾದರು. ಇನ್ನು ರಾಜ್ಯ ಹೈಕೋರ್ಟ್​ನಲ್ಲಿ ಹಂಗಾಮಿ ಸಿಜೆ ಆಗಿ ಕಾರ್ಯ ನಿರ್ವಹಿಸಿದ ನ್ಯಾ. ಸತೀಶ್ ಚಂದ್ರ ಶರ್ಮಾ ತೆಲಂಗಾಣ ಹೈಕೋರ್ಟ್ ಸಿಜೆ ಆಗಿ ವರ್ಗಾವಣೆಯಾದರು.
  4. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಗಲಿಕೆ : ಏಪ್ರಿಲ್ ತಿಂಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುವ ಅವಧಿಯಲ್ಲೇ ಕನ್ನಡಿಗ, ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದು, ನ್ಯಾಯಾಂಗ ಕ್ಷೇತ್ರದಲ್ಲಿ ಕಹಿ ನೆನಪು ದಾಖಲಿಸಿತು. ಜತೆಗೆ ಓರ್ವ ಜನಾನುರಾಗಿ ನ್ಯಾಯಮೂರ್ತಿಯನ್ನು ದೇಶದ ನ್ಯಾಯಾಂಗ ವ್ಯವಸ್ಥೆ ಕಳೆದುಕೊಂಡಿತು.
  5. ಹೈಕೋರ್ಟ್ ಕಲಾಪ ನೇರ ಪ್ರಸಾರ :ಮೇ ತಿಂಗಳಲ್ಲಿ ರಾಜ್ಯ ಹೈಕೋರ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಾಲಯದ ಕಲಾಪವನ್ನು ಯೂಟ್ಯೂಬ್​​ನಲ್ಲಿ ಪ್ರಸಾರ ಮಾಡಲಾಯಿತು. ನ್ಯಾಯಾಂಗ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಮೊದಲ ಹೆಜ್ಜೆಯಾಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠದ ಕಲಾಪವನ್ನು ಸಾರ್ವಜನಿಕಗೊಳಿಸಲಾಯಿತು. ಹೈಕೋರ್ಟ್ ಕಲಾಪಗಳನ್ನು ಲೈವ್ ಮೂಲಕ ಸಾರ್ವಜನಿಕಗೊಳಿಸುವ ಹಾಗೂ ಪ್ರೊಸೀಡಿಂಗ್ಸ್ ರೆಕಾರ್ಡ್ ಮಾಡುವ ನಿಯಮಗಳನ್ನು ವರ್ಷಾಂತ್ಯದ ವೇಳೆಗೆ ಅಂತಿಮಗೊಳಿಸಲಾಯಿತು.
  6. ಇ-ಫೈಲಿಂಗ್ ಬಳಕೆಗೆ ಆದ್ಯತೆ :ನ್ಯಾಯಾಲಯದ ಕಾರ್ಯನಿರ್ವಹಣೆಗಳಲ್ಲಿ ಕಾಗದ ಉಳಿತಾಯ ಮಾಡುವ ಹಾಗೂ ವಕೀಲರ ಕೆಲಸ ಸುಲಭಗೊಳಿಸುವ ನಿಟ್ಟಿನಲ್ಲಿ ಪ್ರಕರಣಗಳನ್ನು ದಾಖಲಿಸಲು ಇ-ಫೈಲಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಆದ್ಯತೆ ಮೇರೆಗೆ ಇ-ಫೈಲಿಂಗ್ ಮಾಡಲು ವಕೀಲರಿಗೆ ಮನವಿ ಮಾಡಲಾಯಿತು. ಅಲ್ಲದೇ, ಸರ್ಕಾರಗಳು ಮತ್ತದರ ಪ್ರಾಧಿಕಾರಗಳು 2022ರಿಂದ ಕಡ್ಡಾಯವಾಗಿ ಇ-ಫೈಲಿಂಗ್ ಮೂಲಕವೇ ಪ್ರಕರಣ ದಾಖಲಿಸುವಂತೆ ಆದೇಶಿಸಲಾಯಿತು.
  7. ಹೆಚ್ಚುವರಿ ವಿಶೇಷ ನ್ಯಾಯಾಲಯ ಸ್ಥಾಪನೆ :ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆಗೆ ಹೈಕೋರ್ಟ್ ಆದೇಶದಂತೆ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಸ್ಥಾಪಿಸಲಾಯಿತು. ಇದೇ ವೇಳೆ ಫೋಕ್ಸೋ ಪ್ರಕರಣಗಳ ವಿಶೇಷ ನ್ಯಾಯಾಲಯವನ್ನೂ ಹೆಚ್ಚುವರಿಯಾಗಿ ಸ್ಥಾಪಿಸಲಾಯಿತು.
  8. ನ್ಯಾಯಾಧಿಕರಣಗಳಿಗೂ ವರ್ಚುಯಲ್ ವಿಚಾರಣೆ ವ್ಯವಸ್ಥೆ ಕಲ್ಪಿಸಲು ಆದೇಶ : ಕೋವಿಡ್ ಕಾರಣಗಳಿಂದಾಗಿ ಕಂದಾಯ ಕೋರ್ಟ್​ಗಳಾದ ಜಿಲ್ಲಾಧಿಕಾರಿ, ಎಸಿ, ತಹಶೀಲ್ದಾರರ ಅರೆನ್ಯಾಯಿಕ ಪ್ರಾಧಿಕಾರಗಳ ಕಾರ್ಯ ನಿರ್ವಹಣೆಗೆ ವರ್ಚುಯಲ್ ವಿಚಾರಣೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತು.

ಇದನ್ನೂ ಓದಿ:2021 Rewind: ರಾಜ್ಯ ಹೈಕೋರ್ಟ್ 2021ರಲ್ಲಿ ನೀಡಿದ ಮಹತ್ವದ ತೀರ್ಪುಗಳು

For All Latest Updates

ABOUT THE AUTHOR

...view details