ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪದ ಕಡಲ ತೀರದಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ತಮ್ಮ ದೇಶದ ಪ್ರವಾಸೋದ್ಯಮಕ್ಕೆ ಎಲ್ಲಿ ಪೆಟ್ಟು ಬೀಳುತ್ತದೋ ಎಂಬ ಆತಂಕದಿಂದ ಮಾಲ್ಡೀವ್ಸ್ ಸರ್ಕಾರದ ಕೆಲವು ಸಚಿವರು ಮೋದಿ ಮತ್ತು ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ಸಾಮಾಜಿಕ ಮಾಧ್ಯಮದಲ್ಲಿ 'ಮಾಲ್ಡೀವ್ಸ್ ಬಹಿಷ್ಕಾರ' ಕೂಗು ಕೇಳಿ ಬರುತ್ತಿದ್ದು, ಅನೇಕ ಮಂದಿ ಭಾರತೀಯರು ಮಾಲ್ಡೀವ್ಸ್‌ಗೆ ತಮ್ಮ ಬುಕಿಂಗ್ ರದ್ದುಗೊಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮಂದಿ ಭಾರತೀಯರು ದ್ವೀಪ ರಾಷ್ಟ್ರಕ್ಕೆ ತಮ್ಮ ಯೋಜಿತ ರಜಾದಿನಗಳಂದು ತೆರಳಲು ಬುಕ್ ಮಾಡಿದ್ದ ಟಿಕೆಟ್ಗಳನ್ನು ರದ್ದುಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇತ್ತೀಚಿನ ಘಟನೆಗಳು ಮತ್ತು ಬಹಿಷ್ಕಾರದ ಕರೆಯಿಂದ ಉಂಟಾಗುವ ಪರಿಣಾಮವನ್ನು ಮುಂದಿನ 20-25 ದಿನಗಳಲ್ಲಿ ನೋಡಬಹುದು ಎಂದು ಭಾರತೀಯ ಪ್ರವಾಸ ನಿರ್ವಾಹಕರ ಸಂಘ ಅಂದಾಜಿಸಿದೆ. ಆದಾಗ್ಯೂ, ಸಾಮೂಹಿಕ ಟಿಕೆಟ್ ರದ್ದತಿ ವರದಿಗಳನ್ನು ನಿರ್ವಾಹಕರು ನಿರಾಕರಿಸಿದ್ದಾರೆ. ವಿಮಾನ ಟಿಕೆಟ್ ಹಾಗೂ ಹೋಟೆಲ್‌ಗೆ ಮುಂಗಡವಾಗಿ ಹಣ ಪಾವತಿಸಿದ್ದರೆ ಅದನ್ನು ರದ್ದು ಮಾಡುವುದಿಲ್ಲ ಎಂದು ತಿಳಿಸಿದೆ.
ಮೇಕ್ ಮೈ ಟ್ರಿಪ್‌ನ ಸಂಸ್ಥಾಪಕ ದೀಪ್ ಕಲ್ರಾ ಮಾಹಿತಿ ನೀಡಿ, ದ್ವೀಪ ರಾಷ್ಟ್ರಕ್ಕೆ ಭಾರತೀಯರು ಭೇಟಿ ನೀಡಲು ಪ್ಲಾನ್ ಮಾಡಿಕೊಂಡಿದ್ದ ರಜಾದಿನಗಳನ್ನು ಸಾಮೂಹಿಕವಾಗಿ ರದ್ದುಗೊಳಿಸಿಲ್ಲ. ನಮಗೆ ಯಾವುದೇ ಸಾಮೂಹಿಕ ರದ್ಧತಿ ಕಂಡುಬಂದಿಲ್ಲ ಎಂದಿದ್ದಾರೆ. ಈ ಮಧ್ಯೆ, ಬಹಿಷ್ಕಾರದ ಕರೆಗಳ ಪರಿಣಾಮವು 20-25 ದಿನಗಳಲ್ಲಿ ಗೋಚರಿಸುತ್ತದೆ ಎಂದು ಭಾರತೀಯ ಪ್ರವಾಸ ನಿರ್ವಾಹಕರ ಸಂಘ ತಿಳಿಸಿದೆ.