ನವದೆಹಲಿ: ಗೌತಮ್ ಅದಾನಿ ವಿಷಯವಾಗಿ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸುತ್ತಿದೆ. ನೇರವಾಗಿ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಮಾತಿನ ಬಾಣ ಪ್ರಯೋಗಿಸುತ್ತಿದ್ದಾರೆ. ಲೋಕಸಭೆಯಲ್ಲಿ ರಾಹುಲ್ ಅಬ್ಬರಿಸಿದರೆ, ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಮಧ್ಯೆ ಅದಾನಿ ಷೇರುಗಳ ಬೆಲೆ ನಿಧಾನವಾಗಿ ಸುಸ್ಥಿತಿಗೆ ಮರಳುತ್ತಿವೆ. ಈ ಬಗ್ಗೆ ಸಂಸತ್ನ ಮೇಲ್ಮನೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಈ ಮಾತು ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಬುಧವಾರ ವಾಗ್ವಾದಕ್ಕೆ ಕಾರಣವಾಯಿತು. ಅದಾನಿ ಷೇರುಗಳ ಬೆಲೆ ಏರಿಕೆ ನೋಡಿದರೆ ಇದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ "ಸ್ನೇಹ" ವಲ್ಲದೇ ಮತ್ತೇನು ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಅದಾನಿ - ಹಿಂಡೇನ್‌ಬರ್ಗ್ ವಿವಾದದ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಒತ್ತಾಯಿಸಿದ ಖರ್ಗೆ ಅವರು "ಪ್ರಧಾನಿ ನಿರ್ಭೀತರಾಗಿದ್ದರೆ, ಅದಾನಿ-ಹಿಂಡೆನ್‌ಬರ್ಗ್ ವಿವಾದವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸುವುದಕ್ಕೆ ಹೆದರುವುದೇಕೆ’’ ಎಂದು ಪ್ರಶ್ನಿಸಿದರು.
ದಾಖಲೆ ಇಟ್ಟು ಮಾತನಾಡಿ ಎಂದ ಸಭಾಪತಿ:ಖರ್ಗೆ ಅವರ ಈ ಮಾತಿಗೆ ರಾಜ್ಯಸಭಾ ಸಭಾಪತಿ ಜಗದೀಪ್ ಧಂಖರ್, ತಮ್ಮ ಆರೋಪಕ್ಕೆ ದಾಖಲೆಗಳನ್ನು ನೀಡುವಂತೆ ಕೇಳಿದರು. ನಿಮ್ಮ ಮಾತಿಗೆ ಅನುಸಾರವಾಗಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಅದನ್ನು ದೃಢೀಕರಿಸುವಂತೆ ಕೇಳಿದರು. ಸದನವು ದಾಖಲೆಗಳಿಲ್ಲದೇ ಆರೋಪ ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಖರ್ಗೆ ಅವರಿಗೆ ಸಭಾಪತಿ ಹೇಳಿದರು.