ಚೆನ್ನೈ : ಚೆನ್ನೈ ಮೂಲದ ಕ್ರಿಯಾ ಮೆಡಿಕಲ್ ಟೆಕ್ನಾಲಜೀಸ್ ಕಂಪನಿ ತಯಾರಿಸಿರುವ ಹೊಸ ಆರ್‌ಟಿ-ಕ್ಯೂಪಿಸಿಆರ್ (RT-qPCR kit) ಪರೀಕ್ಷಾ ಕಿಟ್ ಅನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಗುರುವಾರ ಅನುಮೋದಿಸಿದೆ. ಈ ಕಿಟ್ ಇನ್ಫ್ಲುಯೆಂಜಾ (ಎಚ್1ಎನ್1, ಎಚ್3ಎನ್2, Yamagata and Victoria sublineages), ಕೋವಿಡ್- 19 ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಗಳನ್ನು ಪತ್ತೆ ಮಾಡಬಲ್ಲದು. ದೇಶದ ಅನೇಕ ರಾಜ್ಯಗಳಲ್ಲಿ ಈ ವೈರಸ್ಗಳ ಹರಡುವಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಕ್ರಿವಿಡಾ ಟ್ರೈವಸ್ (KRIVIDA Trivus) ಪರೀಕ್ಷಾ ಕಿಟ್ಗೆ ಅನುಮತಿ ನೀಡಿರುವುದು ಗಮನಾರ್ಹ.
ಗಂಟೆಯೊಳಗೆ ಫಲಿತಾಂಶ:ಮೂರು ರೋಗಕಾರಕ ವೈರಸ್ಗಳು ಒಂದೇ ರೀತಿಯ ಆರಂಭಿಕ ರೋಗಲಕ್ಷಣಗಳನ್ನು ಹೊಂದಿವೆ. ಆದರೆ, ಅನಾರೋಗ್ಯವು ಮುಂದುವರಿಯುವ ರೀತಿ, ಹರಡುವ ಬಗೆ ಮತ್ತು ಇವಕ್ಕೆ ನೀಡಬೇಕಾದ ಚಿಕಿತ್ಸೆಗಳು ವಿಭಿನ್ನವಾಗಿವೆ. ಕ್ರಿವಿಡಾ ಟ್ರೈವಸ್ ಪರೀಕ್ಷಾ ಕಿಟ್ ಇದು ಇನ್ಫ್ಲುಯೆಂಜಾ, SARS-CoV-2 ಉಸಿರಾಟದ ಸಿನ್ಸಿಟಿಯಲ್ ವೈರಸ್ ಅನ್ನು ಅತ್ಯಂತ ಕಡಿಮೆ ಸಮಯದಲ್ಲಿ ಪತ್ತೆ ಮಾಡುತ್ತದೆ. ಈ ಪರೀಕ್ಷೆಯ ಆವರ್ತನ ಸಮಯವು 27 ನಿಮಿಷಗಳಾಗಿದ್ದು, 50 ರಿಂದ 60 ನಿಮಿಷಗಳಲ್ಲಿ ಫಲಿತಾಂಶ ಪಡೆಯಬಹುದು. ಹೀಗಾಗಿ ರೋಗ ಪತ್ತೆಯಾದರೆ ಕೂಡಲೇ ಚಿಕಿತ್ಸೆ ಆರಂಭಿಸಲು ಅನುಕೂಲವಾಗುತ್ತದೆ ಎಂದು ಕಂಪನಿ ಹೇಳಿದೆ.
ಲಭ್ಯವಿರುವ ಎಲ್ಲಾ RT-PCR ಸಾಧನಗಳಲ್ಲಿ ಕಿಟ್ ಅನ್ನು ಬಳಸಬಹುದು. ಐಸಿಎಂಆರ್ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ 225 ತಿಳಿದಿರುವ ಪಾಸಿಟಿವ್ ಸ್ಯಾಂಪಲ್ಗಳು ಮತ್ತು 85 ನಕಾರಾತ್ಮಕ ಮಾದರಿಗಳನ್ನು ಬಳಸಿಕೊಂಡು ಕಿಟ್ ಅನ್ನು ಮೌಲ್ಯಮಾಪನ ಮಾಡಿದೆ. ಕ್ರಿವಿಡಾ ಟ್ರೈವಸ್ ನ ಒಟ್ಟಾರೆ ಸೂಕ್ಷ್ಮತೆಯು 99.11 ಪ್ರತಿಶತ ಮತ್ತು ನಿರ್ದಿಷ್ಟತೆಯು 100 ಪ್ರತಿಶತವಾಗಿದೆ.