ಬಹುತೇಕ ಅಭ್ಯರ್ಥಿಗಳು ಸಿವಿಲ್ ಸರ್ವಿಸ್ ಪರೀಕ್ಷೆಯ ಮೊದಲ ಹಂತ ಪ್ರಿಲಿಮ್ಸ್‌ಗೆ ಅರ್ಹತೆ ಪಡೆಯಲು ಹರಸಾಹಸ ಪಡುತ್ತಿರುತ್ತಾರೆ. ತಯಾರಿ ಹೇಗಿರಬೇಕು, ಪ್ರಶ್ನೆಗಳ ಸ್ವರೂಪ ಹೇಗಿರುತ್ತವೆ ಎಂಬ ಬಗ್ಗೆ ಅವರಿಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ. ಪ್ರಶ್ನೆ ಪತ್ರಿಕೆ ವಸ್ತುನಿಷ್ಠ ಮಾದರಿಯಲ್ಲಿದ್ದು, ಪ್ರಿಲಿಮ್ಸ್ ತೇರ್ಗಡೆ ಸುಲಭ ಎಂಬ ತಪ್ಪು ಕಲ್ಪನೆ ಮತ್ತು ಅತಿಯಾದ ಆತ್ಮವಿಶ್ವಾಸ ಕೆಲವರಿಗಿದೆ. ಹಾಗಾಗಿ, ಪೂರ್ವಭಾವಿ ಪರೀಕ್ಷೆಯ ಮಾದರಿಯನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಪರೀಕ್ಷೆಯ ಮೊದಲ ಹಂತವಾಗಿರಲಿ. ನಾಗರಿಕ ಸೇವಾ ಪರೀಕ್ಷೆಯ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನಾವಳಿ ರೂಪಿಸಲಾಗುತ್ತದೆ. ಹಾಗಾಗಿ, ಮೊದಲು ಪರೀಕ್ಷೆಯ ಉದ್ದೇಶಗಳನ್ನು ತಿಳಿದುಕೊಳ್ಳೋಣ.
* ಜ್ಞಾನ ಮತ್ತು ಕೌಶಲ್ಯ ಪಡೆಯಲು ನಿರಂತರವಾಗಿ ಶ್ರಮಿಸುತ್ತಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು.
* ನಾಗರಿಕ ಸೇವೆಗಳಿಗೆ ಭಾವನಾತ್ಮಕವಾಗಿ ಅಂಟಿಕೊಂಡಿರುವವರನ್ನು ಗುರುತಿಸುವುದು.
* ಅಭ್ಯರ್ಥಿಗಳು ಸಾರ್ವಜನಿಕ ಸೇವೆಗೆ ಅಗತ್ಯವಿರುವ ಮೂಲಭೂತ ವಿಶ್ಲೇಷಣಾತ್ಮಕ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನು ತಿಳಿಯುವುದು.
* ಮೇಲಿನ ಎಲ್ಲಾ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು.
ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ(ಪ್ರಿಲಿಮ್ಸ್) ಅಭ್ಯರ್ಥಿಗಳ ಪ್ರತಿಭೆ ಪರೀಕ್ಷಿಸುವ ಮೂಲಕ ಈ ಉದ್ದೇಶಗಳನ್ನು ಸಾಧಿಸಲಾಗುತ್ತದೆ.
ಪ್ರಶ್ನೆಗಳ ವಿನ್ಯಾಸದ ಹಿಂದೆ..: ಅಭ್ಯರ್ಥಿಯ ಮೂಲಭೂತ ಜ್ಞಾನವನ್ನು ಪರೀಕ್ಷಿಸಲು ಪ್ರಸ್ತುತ ವ್ಯವಹಾರಗಳ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳಲಾಗುತ್ತದೆ. ಇವುಗಳ ಮೂಲಕ ಅಭ್ಯರ್ಥಿಯಲ್ಲಿರುವ ಪ್ರಚಲಿತ ವಿದ್ಯಮಾನಗಳ ಸಾಮಾನ್ಯ ತಿಳುವಳಿಕೆಯನ್ನು ಅಳೆಯಲಾಗುತ್ತದೆ.
* ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳಲ್ಲಿ ಅಭ್ಯರ್ಥಿಯ ಆಸಕ್ತಿಯನ್ನು ಪರೀಕ್ಷಿಸಲಾಗುತ್ತದೆ. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದನೆ, ಪರಿಹಾರಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಮಾಹಿತಿ ಇರಬೇಕು.
* ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯಕ್ರಮಗಳು, ಅವು ಸಾಮಾನ್ಯ ಜನರ ಮೇಲೆ ಬೀರುವ ಪ್ರಭಾವದ ಬಗ್ಗೆ ಪ್ರಶ್ನೆಗಳಿರುತ್ತವೆ.
* ಭವಿಷ್ಯದ ಕಾರ್ಯಕ್ರಮಗಳ ಕುರಿತು ಸರ್ಕಾರದ ನಿಲುವು ಮತ್ತು ಅವುಗಳನ್ನು ಸಾಧಿಸಲು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಅಭ್ಯರ್ಥಿಯ ತಿಳುವಳಿಕೆಯನ್ನು ಒರೆಗೆ ಹಚ್ಚುವ ಪ್ರಶ್ನೆಗಳಿರುತ್ತವೆ.
* ಪ್ರಶ್ನೆಗಳು ಕನಿಷ್ಠ ತಾರ್ಕಿಕ ಜ್ಞಾನ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಏಕೆಂದರೆ ಈ ಕೌಶಲಗಳು ಅಭ್ಯರ್ಥಿಯ ಭವಿಷ್ಯದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತವೆ.
ಪೂರ್ವಭಾವಿ ಪರೀಕ್ಷೆಗೆ ತಯಾರಿ ಹೇಗೆ?: ಪೂರ್ವಭಾವಿ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಜನರಲ್ ಸ್ಟಡೀಸ್ ಪೇಪರ್-1, ಜನರಲ್ ಸ್ಟಡೀಸ್ ಪೇಪರ್-2. ಪ್ರತಿ ಪತ್ರಿಕೆಗೆ 200 ಅಂಕಗಳು. ಪತ್ರಿಕೆ-1 100 ಪ್ರಶ್ನೆಗಳನ್ನು ಹೊಂದಿರುತ್ತದೆ. ಪ್ರತಿ ಸರಿಯಾದ ಉತ್ತರಕ್ಕೆ 2 ಅಂಕ. ಪತ್ರಿಕೆ-2 80 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಸರಿಯಾದ ಉತ್ತರಕ್ಕೆ 2 1/2 ಅಂಕಗಳು. ನಕಾರಾತ್ಮಕ ಅಂಕಗಳೂ ಇವೆ. ಪ್ರತಿ ತಪ್ಪು ಉತ್ತರಕ್ಕೆ ಶೇ 0.33 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಅಭ್ಯರ್ಥಿಯು ಪ್ರಶ್ನೆ ಪತ್ರಿಕೆ-2ರಲ್ಲಿ ಶೇ.33 ಅಂಕಗಳನ್ನು ತೆಗೆದುಕೊಂಡರೆ ಸಾಕು. ಅಂದರೆ, 200 ಅಂಕಗಳಲ್ಲಿ ಕನಿಷ್ಠ 67 ಅಂಕ ಗಳಿಸಬೇಕು. ಈ ಅಂಕಗಳನ್ನು ಸಾಧಿಸಲು ವಿಫಲವಾದರೆ ಪತ್ರಿಕೆ ತಿರಸ್ಕಾರವಾಗುತ್ತದೆ. ಪೇಪರ್-2 ಮತ್ತು ಪೇಪರ್-1ರಲ್ಲಿ Cut off ಅಂಕಗಳಿಗಿಂತ ಹೆಚ್ಚು ಅಂಕ ಗಳಿಸಿದವರಿಗೆ ಮುಂದಿನ ಹಂತಕ್ಕೆ ಆದ್ಯತೆ. ಇದರಲ್ಲಿ ಪಡೆದ ಅತ್ಯಧಿಕ ಅಂಕಗಳ ಆಧಾರದಡಿ ಮೀಸಲಾತಿ ನೀತಿ ಅನ್ವಯ ಯುಪಿಎಸ್‌ಸಿ ಮೆರಿಟ್ ಪಟ್ಟಿ ಸಿದ್ಧಪಡಿಸುತ್ತದೆ.
ಪೂರ್ವಭಾವಿ ಪರೀಕ್ಷೆ: ಅಭ್ಯರ್ಥಿಗೆ ಗೊತ್ತಿರಬೇಕಾದ ವಿಚಾರಗಳು-
* ಪ್ರಶ್ನೆ ಪತ್ರಿಕೆ-2ರಲ್ಲಿ ಕನಿಷ್ಠ ಅಂಕಗಳನ್ನು ಪಡೆದಿರಬೇಕು. ಪ್ರಶ್ನೆ ಪತ್ರಿಕೆ-1ರಲ್ಲಿ ಪಡೆದ ಅಂಕಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುತ್ತದೆ.
* ಪೇಪರ್-1 ರಲ್ಲಿ ನೀಡಿರುವ 100 ಪ್ರಶ್ನೆಗಳಲ್ಲಿ 40ಕ್ಕೆ ಸರಿ ಉತ್ತರಗಳನ್ನು ನೀಡಬೇಕು.
* ಇನ್ನೂ 15 ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಬರೆಯಬೇಕು.
* ಉತ್ತರಗಳ ಬಗ್ಗೆ ಅಂದಾಜು ಮಾಡಬಾರದು.
* ಒತ್ತಡದಲ್ಲಿ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ಬರೆಯಬೇಡಿ.
ಅಭ್ಯರ್ಥಿಯು ತನ್ನ ಸರಿಯಾದ ಸಿದ್ದತೆಯನ್ನು ಪಠ್ಯಕ್ರಮದ ಮೂಲಭೂತ ಅಂಶಗಳಿಂದಲೇ ಪ್ರಾರಂಭಿಸುವುದು ಅತ್ಯಗತ್ಯ. ಪಠ್ಯಕ್ರಮವನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಪ್ರಶ್ನೆ ಪತ್ರಿಕೆಯಲ್ಲಿ ಬರುವ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳಬೇಕು.
ಪರೀಕ್ಷೆಗೆ ತಯಾರಿ ಹೇಗೆ?: ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗುವವರಿಗೆ ಪಠ್ಯಕ್ರಮದ ವಿಷಯಗಳು ಹೊಸದಾಗಿ ಕಾಣಿಸಬಹುದು. 10ನೇ ತರಗತಿಯ ನಂತರ ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ, ಕಲೆ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವೆಲ್ಲವೂ ಹೊಸ ವಿಷಯಗಳಾಗಿರುವುದರಿಂದ ಮೂಲಭೂತ ಅಂಶಗಳನ್ನು ಕರಗತ ಮಾಡಿಕೊಳ್ಳುವುದು ಅವಶ್ಯಕ. ನಂತರ ಹಿಂದಿನ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳಬೇಕು.