ಕೇರಳ: ಮಾಡದೇ ಇರುವ ತಪ್ಪಿಗೆ ಕಷ್ಟದಲ್ಲಿಯೇ ಜೀವನ ಸಾಗಿಸುತ್ತಿರುವ ವಿದ್ಯಾವಂತ ಕುಟುಂಬವೊಂದು ಉದ್ಯೋಗಕ್ಕಾಗಿ ಪರಿತಪ್ಪಿಸುತ್ತಿರುವ ಅಮಾನೀಯ ಘಟನೆ ಸಾಕ್ಷರತ ರಾಜ್ಯ ಕೇರಳದಲ್ಲಿ ಜರುಗಿದೆ.
ಶೇಕಡಾ 90ರಷ್ಟು ಸಾಕ್ಷರತೆ ಹೊಂದಿರುವ ವಿದ್ಯಾವಂತರ ನಾಡು ಎಂದೇನಿಸಿಕೊಂಡಿರುವ ಕೇರಳ ರಾಜ್ಯದ ಕಣ್ಣೂರಿನಲ್ಲಿರುವ ಕೊಟ್ಟಿಯೂರ್ ಇರಿಟ್ಟಿಯಲ್ಲಿ ಕಳೆದ 15 ವರ್ಷಗಳಿಂದ ಕುಟುಂಬವೊಂದು ಕಣ್ಣೀರಿನ ದಿನಗಳನ್ನು ಕಳೆಯುತ್ತಿದೆ. ಬಾಲ್ಯದಲ್ಲಿಯೇ ತಂದೆಯಿಂದ ಮಾರಕ ಎಡ್ಸ್ ರೋಗಕ್ಕೆ ತುತ್ತಾದ ಅಕ್ಷರಾ ಮತ್ತು ಅವಳ ಸಹೋದರ ಆನಂದು ವಿದ್ಯಾವಂತರಾಗಿದ್ದರೂ ಅವರ ಆರೋಗ್ಯ ವಿಚಾರವಾಗಿ ಕೆಲಸ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಉದ್ಯೋಗಕ್ಕಾಗಿ ಪರಿತಪ್ಪಿಸುತ್ತಿದೆ ವಿದ್ಯಾವಂತ 'ಹೆಚ್ಐವಿ ಕುಟುಂಬ' ಅಕ್ಷರಾ ಬಿಎಸ್ಸಿ ಸೈಕಾಲಜಿಯಲ್ಲಿ ಪದವೀಧರರಾಗಿದ್ದು, ಆನಂದು ವಾಣಿಜ್ಯದಲ್ಲಿ ಪದವಿ ಮುಗಿಸಿದ್ದಾರೆ. ಅವರ ಅಕ್ಕ, ಅತಿರಾ, ಜೈವಿಕ ತಂತ್ರಜ್ಞಾನದಲ್ಲಿ ಎಂಟೆಕ್ ಮುಗಿಸಿದ್ದಾರೆ. ಅತಿರಾ 2017 ರಲ್ಲಿ ಎಂ ಟೆಕ್ ಪೂರ್ಣಗೊಳಿಸಿದ್ದು, ಹಲಾವರು ಕಂಪನಿಗಳ ಸಂದರ್ಶನಗಳನ್ನು ಎದುರಿಸಿದ್ದಾರೆ. ಎರ್ನಾಕುಲಂನ ಖಾಸಗಿ ಕಂಪನಿಯ ಆಯ್ಕೆ ಪಟ್ಟಿಯಲ್ಲಿ ಮೊದಲ ಅಭ್ಯರ್ಥಿಯಾಗಿ ಸ್ಥಾನ ಪಡೆದು ಕೊಂಡಿದ್ದರು ಸಹ ಆಕೆಗೆ ಕೆಲಸ ಸಿಗಲಿಲ್ಲ.
ಅವರ ತಾಯಿ ರಾಮ ಹೇಳುವಂತೆ ಅನೇಕ ವರ್ಷಗಳಿಂದ ಕಟುಂಬ ಜನರ ಬೆಂಬಲದೊಂದಿಗೆ ಸಾಗುತ್ತಿದೆ. ಸ್ವಂತ ಕಾಲ ಮೇಲೆ ನಿಲ್ಲಬೇಕೆಂದುಕೊಂಡರೂ ಕೆಲಸ ಸಿಗುತ್ತಿಲ್ಲ. ಇನ್ನು ಮುಂದೆ ಉದ್ಯೋಗವಿಲ್ಲದೇ ಬದುಕು ನಡೆಸುವುದು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ರಾಮ ಮತ್ತು ಶಾಜಿ ದಂಪತಿಯ ಮೂವರು ಮಕ್ಕಳಲ್ಲಿ ಅಕ್ಷರಾ ಮತ್ತು ಆನಂದು ಕಿರಿಯರಾಗಿದ್ದು, ಕೊಟ್ಟಿಯೂರ್‌ನ ಅಂಬಲಕ್ಕುನು ಕೊಟ್ಟಮ್‌ಚಿರದಲ್ಲಿ ವಾಸಿಸುತ್ತಿದ್ದಾರೆ. ರಾಮ ತನ್ನ ಪತಿ ಶಾಜಿಯಿಂದ ಈ ಕಾಯಿಲೆಗೆ ತುತ್ತಾಗಿದ್ದಳು. ಅವಳ ಮೂಲಕ, ಹಿರಿಯ ಮಗಳನ್ನು ಹೊರತುಪಡಿಸಿ ಅವರ ಇಬ್ಬರು ಮಕ್ಕಳು ಎಚ್‌ಐವಿ ಸೋಂಕಿಗೆ ತುತ್ತಾಗಿದ್ದರು. ಸಮಾಜದಲ್ಲಿ ಅನೇಕರು ಅವರನ್ನು ಬಹಿಷ್ಕರಿಸಿದರೂ, ಅವರೊಂದಿಗೆ ನಿಂತ ಕೆಲವು ಒಳ್ಳೆಯ ಹೃದಯದ ಜನರು ಕಷ್ಟ ಕಾಲಕ್ಕೆ ಸಹಾಯ ಹಸ್ತ ಚಾಚಿದ್ದರು.
ನಟ ಸುರೇಶ್ ಗೋಪಿ ಅವರು ಈ ಕುಟುಂಬವನ್ನು ದತ್ತು ತೆಗೆದುಕೊಂಡಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಅದು ನಿಜವಲ್ಲ ಎಂದು ಅಕ್ಷರಾ ಸ್ಪಷ್ಟಪಡಿಸಿದ್ದಾರೆ. ಸ್ವಲ್ಪ ಸಹಾಯವನ್ನು ಹೊರತುಪಡಿಸಿ, ನಮ್ಮ ಜೀವನವು ಒಂಟಿತನ ಮತ್ತು ಕಳಂಕಿತವಾಗಿದೆ ಎಂದು ಅವರು ಹೇಳಿದರು.
ವಿದ್ಯ ಇದ್ದರೂ ಕತ್ತಲಲ್ಲಿಯೇ ಜೀವನ ಸಾಗಿಸುತ್ತಿರುವ ಇವರಿಗೆ ಸಹಾನುಭೂತಿಯಲ್ಲ ಅಗತ್ಯ ಇಲ್ಲ. ಬದಲಿಗೆ ಅವರ ಜೀವನವನ್ನು ರೂಪಿಸುವ ಕೆಲಸದ ಅವಶ್ಯಕತೆ ಇದೆ. ಸದ್ಯ ಕುಟುಂಬ ಕೇರಳ ಸರ್ಕಾರ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಬಲವನ್ನು ಕೋರಿದ್ದು ಮುಂದೇನಾಗುತ್ತದೆ ಎಂದು ಕಾಯ್ದುನೋಡಬೇಕಿದೆ.