ಬೆಂಗಳೂರು: ಹಿಜಾಬ್ ಧರಿಸಿ ತರಗತಿಗೆ ಬರದಂತೆ ನಿರ್ಬಂಧಿಸಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಹಿಜಾಬ್ ನಿರ್ಬಂಧಿಸಿರುವ ಶಿಕ್ಷಣ ಸಂಸ್ಥೆಗಳ ಕ್ರಮ ಹಾಗೂ ವಸ್ತ್ರ ಸಂಹಿತೆ ಕುರಿತು ರಾಜ್ಯ ಸರ್ಕಾರ ಕಳೆದ ಫೆ.5ರಂದು ಹೊರಡಿಸಿರುವ ಆದೇಶ ರದ್ದು ಕೋರಿ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಮತ್ತು ಇತರೆ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಪೋಷಕರ ಸಲ್ಲಿಸಿರುವ 4 ಅರ್ಜಿಗಳನ್ನು ಇಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ: ವಕೀಲ ಕಾಮತ್
ಬೆಳಗ್ಗೆ ಹಾಗೂ ಮಧ್ಯಾಹ್ನದ ಕಲಾಪ ಸೇರಿ 4 ಗಂಟೆಗೂ ಹೆಚ್ಚು ಕಾಲ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅಂತಿಮವಾಗಿ ಹಿಜಾಬ್ ಧರಿಸಿರುವ ಮಹಿಳೆಯರನ್ನು ಕೆಲವು ಯುವಕರು ಅಟ್ಟಿಸಿಕೊಂಡು ಹೋಗುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿಭಟನೆ, ಬಂದ್ ಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಸೂಕ್ತ ಆದೇಶ ಹೊರಡಿಸಬೇಕು. ಅಲ್ಲದೇ, ಹಿಜಾಬ್ ಧರಿಸುವ ಕುರಿತಂತೆ ಅಗತ್ಯ ಮಧ್ಯಂತರ ಆದೇಶ ಹೊರಡಿಸಬಹುದು ಎಂದು ನಾಲ್ಕು ಅರ್ಜಿಗಳ ಪರ ವಾದ ಮಂಡಿಸಿದ ವಕೀಲ ಕಾಮತ್ ಕೋರಿದರು.