ವಾರಣಾಸಿ (ಉತ್ತರ ಪ್ರದೇಶ): ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಶೃಂಗಾರ ಗೌರಿ ಪ್ರಕರಣದ ತೀರ್ಪನ್ನು ಇಂದು ಪ್ರಕಟಿಸಲಿದೆ. ಜಿಲ್ಲಾ ನ್ಯಾಯಾಲಯದ ಆದೇಶಕ್ಕಿಂತ ಒಂದು ದಿನ ಮುಂಚಿತವಾಗಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಲಾಗಿದೆ.
ವಾರಣಾಸಿಯ ಜ್ಞಾನವಾಪಿ ಮಸೀದಿಯ ಹೊರಗಿನ ಗೋಡೆಯಲ್ಲಿ ಹಿಂದೂ ದೇವರ ಮೂರ್ತಿಗಳಿದ್ದು, ಅವುಗಳಿಗೆ ಪೂಜೆ ಸಲ್ಲಿಸಲು ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ ಕಳೆದ ತಿಂಗಳು ಮಾಡಿ ಮುಗಿಸಿತ್ತು. ಈ ಸಂಬಂಧ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕಳೆದ ತಿಂಗಳು ಆದೇಶವನ್ನು ಸೆಪ್ಟೆಂಬರ್ 12ಕ್ಕೆ ಕಾಯ್ದಿರಿಸಿದ್ದರು.
"ವಾರಣಾಸಿ ನ್ಯಾಯಾಲಯ ಇಂದು ನಿರ್ಣಾಯಕ ವಿಷಯದ ಬಗ್ಗೆ ತೀರ್ಪು ಪ್ರಕಟಿಸಲಿದೆ. ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಾವು ಮುಂಜಾಗ್ರತೆ ವಹಿಸಿದ್ದೇವೆ" ಎಂದು ಪೊಲೀಸ್ ಕಮಿಷನರ್ ಎ. ಸತೀಶ್ ಗಣೇಶ್ ಹೇಳಿದರು.
ಇದನ್ನೂ ಓದಿ:ಜ್ಞಾನವಾಪಿ ಮಸೀದಿ ಪ್ರಕರಣ: ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ಬಂದ ಹಿಂದೂ ಸಂತ; ಪೊಲೀಸರಿಂದ ತಡೆ
ಏನಿದು ಪ್ರಕರಣ?:ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದ ಭಾಗವಾಗಿತ್ತು ಎಂಬುದು ಹಿಂದೂ ಸಮುದಾಯದ ವಾದ. ಈ ಮಸೀದಿಯ ಹೊರ ಗೋಡೆಯಲ್ಲಿ ಶೃಂಗಾರ ಗೌರಿ ಸೇರಿದಂತೆ ಹಿಂದೂ ದೇವರ ವಿಗ್ರಹಗಳಿವೆ. ಇವುಗಳಿಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಐವರು ಹಿಂದೂ ಮಹಿಳೆಯರು ಅರ್ಜಿ ಸಲ್ಲಿಸಿದ್ದರು.
ವಿಡಿಯೋಗ್ರಫಿ ಸಮೀಕ್ಷೆಗೆ ಆದೇಶ: ಇದರ ನಂತರ, ಸ್ಥಳೀಯ ವಾರಣಾಸಿ ನ್ಯಾಯಾಲಯ ಮೇ ತಿಂಗಳಲ್ಲಿ ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆಗೆ ಆದೇಶಿಸಿತ್ತು. ಮೇ 16ರಂದು ಸರ್ವೆ ಕಾರ್ಯ ಪೂರ್ಣಗೊಂಡಿದೆ. ಮೇ 19ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ವಿಡಿಯೋಗ್ರಫಿ ಸಮೀಕ್ಷೆಯ ನಂತರ ಹಿಂದೂ ಕಡೆಯಿಂದ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗವನ್ನು ಹೋಲುವ ರಚನೆ ಕಂಡುಬಂದಿದೆ ಎಂದು ಹೇಳಿಕೊಂಡಿದೆ. ಇದು ಕಾರಂಜಿಯೇ ಹೊರತು ಶಿವಲಿಂಗವಲ್ಲ ಎಂದು ಮಸೀದಿ ಸಮಿತಿ ಪ್ರತಿಭಟಿಸಿತು. ನಮಾಜ್ ಅಥವಾ ಧಾರ್ಮಿಕ ಆಚರಣೆ ಮಾಡಲು ಮುಸ್ಲಿಮರು ಮಸೀದಿಗೆ ಪ್ರವೇಶಿಸಲು ಯಾವುದೇ ರೀತಿಯ ನಿರ್ಬಂಧವನ್ನು ವಿಧಿಸಬಾರದು ಎಂದು ಸಮಿತಿ ಹೇಳಿದೆ.
ಕಳೆದ ತಿಂಗಳು ಕೋರ್ಟ್‌ನಲ್ಲಿ ವಾದ ಪ್ರತಿವಾದ, ಸಾಕ್ಷ್ಯಗಳ ಸಲ್ಲಿಕೆ ಎಲ್ಲವೂ ಮುಗಿದಿದ್ದು, ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಇಂದು ಕೋರ್ಟ್ ಆದೇಶ ಪ್ರಕಟಿಸುತ್ತಿದೆ.
ಇದನ್ನೂ ಓದಿ:ಜ್ಞಾನವಾಪಿ ಮಸೀದಿ ಅರ್ಜಿದಾರ ಮಹಿಳೆ ಪತಿಗೆ ಪಾಕಿಸ್ತಾನದಿಂದ ಶಿರಚ್ಚೇದ ಬೆದರಿಕೆ