ಸೂರತ್:ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ವರ್ಷ ಪ್ರಧಾನಿ ನರೇಂದ್ರ ಮೋದಿಯ ತವರು ರಾಜ್ಯವಾದ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರೂಪಾನಿ ಅವರ ರಾಜೀನಾಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಡಿಸಿಎಂ ನಿತಿನ್ ಪಟೇಲ್ ಮತ್ತು ಸಂಪುಟದ ಇತರ ಹಿರಿಯ ಸಚಿವರೊಂದಿಗೆ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರ ಮನೆಗೆ ಭೇಟಿ ನೀಡಿ, ವಿಜಯ್ ರೂಪಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
'ಬಿಜೆಪಿಯ ಸಂಪ್ರದಾಯ'ಕ್ಕೆ ಅನುಗುಣವಾಗಿರಾಜೀನಾಮೆ
ರಾಜೀನಾಮೆ ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರೂಪಾನಿ, ರಾಜೀನಾಮೆ ಎನ್ನುವುದು ಪಕ್ಷದ ಎಲ್ಲ ಕಾರ್ಯಕರ್ತರಿಗೆ ಸಮಾನ ಅವಕಾಶವನ್ನು ನೀಡುವ 'ಬಿಜೆಪಿಯ ಸಂಪ್ರದಾಯ'ಕ್ಕೆ ಅನುಗುಣವಾಗಿದೆ. ಪಕ್ಷವು ನನಗೆ ಯಾವ ಹುದ್ದೆ ನೀಡಿದರೂ ಕಾರ್ಯನಿರ್ವಹಿಸಲು ನಾನು ಸಿದ್ಧ ಎಂದು ಇದೇ ವೇಳೆ ರೂಪಾನಿ ಹೇಳಿದರು.
ಆಗಸ್ಟ್ 1 ರಂದು ಉತ್ತರ ಪ್ರದೇಶ ಮೂಲದ ರತ್ನಾಕರ್ ಅವರನ್ನು ಗುಜರಾತ್ ಬಿಜೆಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಿಜೆಪಿ ಹೈಕಮಾಂಡ್ ನೇಮಿಸಿತ್ತು. ಗುಜರಾತ್ ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಸಾಧ್ಯತೆಯಿದೆ ಎಂದು ಆಗಲೇ ಹೇಳಲಾಗಿತ್ತು. ಮುಖ್ಯಮಂತ್ರಿ ಬದಲಾವಣೆ ಕೂಗು ಸಹ ಕೇಳಿ ಬಂದಿತ್ತು. ಇದಕ್ಕೆ ಪೂರಕವೆಂಬಂತೆ ವಿಜಯ್ ರೂಪಾನಿ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಕೆಲ ಶಾಸಕರಿಂದ ರೂಪಾನಿ ವಿರುದ್ಧ ದೂರು:
ಪಕ್ಷದಲ್ಲಿ ಕೆಲ ಶಾಸಕರು ಸಿಎಂ ವಿಜಯ್ ರೂಪಾನಿ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆಗಸ್ಟ್ ತಿಂಗಳಲ್ಲಿ ಅಮಿತ್ ಶಾ ಗುಜರಾತ್ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಹಲವು ಶಾಸಕರು ಸಿಎಂ ರೂಪಾಣಿ ಕಾರ್ಯವೈಖರಿ ಬಗ್ಗೆ ದೂರು ನೀಡಿದ್ದರು. ಈ ದೂರಿನ ಬಳಿಕ ರೂಪಾನಿ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೆಲವೇ ತಿಂಗಳಲ್ಲಿ ನಾಲ್ವರು ಬಿಜೆಪಿ ಸಿಎಂ ರಾಜೀನಾಮೆ
ಇತ್ತೀಚಿನ ತಿಂಗಳುಗಳಲ್ಲಿ ರಾಜೀನಾಮೆ ನೀಡಿದ ನಾಲ್ಕನೇ ಬಿಜೆಪಿ ಮುಖ್ಯಮಂತ್ರಿ ರೂಪಾನಿಯಾಗಿದ್ದಾರೆ. ಬಿಎಸ್ ಯಡಿಯೂರಪ್ಪ ಜುಲೈನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಉತ್ತರಾಖಂಡದಲ್ಲಿ ತ್ರಿವೇಂದ್ರ ಸಿಂಗ್ ರಾವತ್ರನ್ನು ಬದಲಿಸಿ ತೀರತ್ ಸಿಂಗ್ ರಾವತ್ ಅವರನ್ನು ಸಿಎಂ ಮಾಡಲಾಗಿತ್ತು. ಆದರೆ ಕೆಲ ದಿನಗಳಲ್ಲಿ ಅವರೂ ರಾಜೀನಾಮೆ ನೀಡಿದ್ದರು.