ನವದೆಹಲಿ:ಆಹಾರ ವಿತರಣಾ ಆ್ಯಪ್ಗಳಾದ ಜೊಮ್ಯಾಟೊ ಮತ್ತು ಸ್ವಿಗ್ಗಿ ಇನ್ಮುಂದೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪಾವತಿ ಮಾಡಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದರು. 45ನೇ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಇಷ್ಟು ದಿನ ಆಹಾರ ಪದಾರ್ಥಗಳ ಆದೇಶ(Order) ಪಡೆದುಕೊಳ್ಳುತ್ತಿದ್ದ ರೆಸ್ಟೋರೆಂಟ್ಗಳು ಜಿಎಸ್‌ಟಿ ಸಂದಾಯ ಮಾಡುತ್ತಿದ್ದವು. ಆದರೆ ಇನ್ಮುಂದೆ ಆಹಾರ ವಿತರಣಾ ಆ್ಯಪ್ಗಳೇ ಈ ಹಣ ಸಂದಾಯ ಮಾಡಲಿವೆ ಎಂದು ಅವರು ತಿಳಿಸಿದ್ದಾರೆ.
ಆಹಾರ ವಿತರಣಾ ಮೊಬೈಲ್ ಅಪ್ಲಿಕೇಶನ್ಗಳು ಮತ್ತು ಹರಿಯಾಣದ ಕೆಲವೊಂದು ರೆಸ್ಟೋರೆಂಟ್ಗಳು ವಾರ್ಷಿಕ ತೆರಿಗೆ ಲೆಕ್ಕಪತ್ರ ಅಥವಾ ತೆರಿಗೆ ರಿಟರ್ನ್ಸ್ ಸಲ್ಲಿಸಿದ ನಂತರ ಗಣನೀಯ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಹೀಗಾಗಿ ಪ್ರಸ್ತುತ ಆ್ಯಪ್ಗಳನ್ನು ಜಿಎಸ್‌ಟಿ ತೆರಿಗೆಗೆ ನೋಂದಾಯಿಸಲಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್, ಇವುಗಳ ಮೇಲೆ ಯಾವುದೇ ಹೊಸ ತೆರಿಗೆ ಘೋಷಣೆ ಮಾಡಿಲ್ಲ. ಆದರೆ ರೆಸ್ಟೋರೆಂಟ್ ನೀಡುವ ಜಿಎಸ್ಟಿಯನ್ನು ಕಟ್ಟಲಿವೆ ಎಂದರು.