ನವದೆಹಲಿ:ಬ್ರಿಟಿಷ್ ಕಾಲದಲ್ಲಿ ದೇಶಕ್ಕೆ ನೀಡಲಾಗಿದ್ದ ಹಲವು ಹೆಸರುಗಳನ್ನು ತೆರೆಮರೆಗೆ ಸರಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ದೊಡ್ಡ ಪ್ರಯೋಗಕ್ಕೆ ಕೈ ಹಾಕಲು ಮುಂದಾಗಿದೆ. ಬ್ರಿಟಿಷರ ಗುಲಾಮಗಿರಿಯನ್ನು ನೆನಪಿಸುವ 'ಇಂಡಿಯಾ' ಪದವನ್ನು ಸಂವಿಧಾನದಿಂದಲೇ ತೆಗೆದುಹಾಕುವ ಮಸೂದೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ದೇಶವು ಸ್ವಾತಂತ್ರ್ಯ 'ಅಮೃತ' ಕಾಲದಲ್ಲಿದ್ದು, ಬ್ರಿಟಿಷ್ ಆಡಳಿತದ ನೆನಪುಗಳನ್ನು ಅಳಿಸುವ ಹಲವು ಪ್ರಯತ್ನಗಳ ಮಧ್ಯೆ ಇಂಥದ್ದೊಂದು ಪ್ರಸ್ತಾಪ ಕೇಳಿಬಂದಿದೆ. ಸಂವಿಧಾನದಲ್ಲಿ ಅಡಕವಾಗಿರುವ ಇಂಡಿಯಾ ಪದವನ್ನು ತೆಗೆದು, 'ಭಾರತ'ವನ್ನು ಮಾತ್ರ ಉಳಿಸಿಕೊಳ್ಳುವ ಮಸೂದೆಯನ್ನು ತರಲು ಮುಂದಾಗಿದೆ. ಇದನ್ನು ಕರೆಯಲಾಗಿರುವ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಪ್ರಸ್ತಾವನೆಗೆ ಸಂಬಂಧಿಸಿದ ತಯಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಆಹ್ವಾನ ಪತ್ರಿಕೆಯಲ್ಲಿ ಭಾರತದ ರಾಷ್ಟ್ರಪತಿ :ನವದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಗೆ ಬರುವ ಗಣ್ಯರನ್ನು ಆಹ್ವಾನಿಸುವ ಸಂದೇಶದಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ' ಎಂದು ಬರೆದಿರುವುದು ಇದಕ್ಕೆ ಇಂಬು ನೀಡಿದೆ. ಇದನ್ನು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟ ಟೀಕಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಂ ರಮೇಶ್, ರಾಷ್ಟ್ರಪತಿ ಭವನದಲ್ಲಿ ಜಿ 20 ಶೃಂಗಸಭೆಗೆ ಆಗಮಿಸಿರುವ ಗಣ್ಯರಿಗೆ ಔತಣಕೂಟದ ನೀಡಲಾಗಿದ್ದು, ಅವರ ಆಹ್ವಾನ ಪತ್ರಿಕೆಯಲ್ಲಿ 'ಭಾರತದ ರಾಷ್ಟ್ರಪತಿ' ಎಂದು ಬರೆಯಲಾಗಿದೆ. ಹೀಗಾಗಿ 'ಇಂಡಿಯಾ' ಹೆಸರು ತೆಗೆದು 'ಭಾರತ' ಎಂದು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನ 1 ನೇ ವಿಧಿಯು ಭಾರತ, ಅಂದರೆ ಅದು ಇಂಡಿಯಾ. ರಾಜ್ಯಗಳ ಒಕ್ಕೂಟವಾಗಿರುತ್ತದೆ ಎಂದಿದೆ. ಇನ್ನು ಮುಂದೆ ಇದನ್ನು 'ಆಕ್ರಮಣಕ್ಕೀಡಾದ ರಾಜ್ಯಗಳ ಒಕ್ಕೂಟ' ಎಂದು ಕರೆಯಬಹುದು ಎಂದು ವ್ಯಂಗ್ಯವಾಡಿದ್ದಾರೆ.