ಕರ್ನಾಟಕ

karnataka

ETV Bharat / bharat

ಸಾಲ ತೀರಿಸಲು ಬಾಲಕಿಯರ ಹರಾಜು, ತಾಯಂದಿರ ಮೇಲೆ ಅತ್ಯಾಚಾರ: ಇದು ಜಾತಿ ಪಂಚಾಯತ್​ಗಳ ವಿಕೃತಿ!

ರಾಜಸ್ಥಾನದಲ್ಲಿ ಸಾಲ ತೀರಿಸುವುದಕ್ಕೆ ಪ್ರತಿಯಾಗಿ ಬಾಲಕಿಯರನ್ನು ಮಾರಾಟ ಮಾಡಲು ಜಾತಿ ಪಂಚಾಯತ್‌ ಆದೇಶಿಸುತ್ತಿರುವ ಆಘಾತಕಾರಿ ವಿಚಾರ ವರದಿಯಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿಗೊಳಿಸಿದೆ.

girls-auctioned-mothers-raped-to-settle-debt-in-rajasthan
ಸಾಲು ತೀರಿಸಲು ಬಾಲಕಿಯರ ಹರಾಜು, ತಾಯಿಂದಿರ ಮೇಲೆ ಅತ್ಯಾಚಾರ: ಇದು ಜಾತಿ ಪಂಚಾಯತ್​ಗಳ ವಿಕೃತ ಆದೇಶ

By

Published : Oct 27, 2022, 10:04 PM IST

ನವದೆಹಲಿ: ರಾಜಸ್ಥಾನದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಅತ್ಯಂತ ಅಮಾನವೀಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೊಟ್ಟ ಸಾಲ ತೀರಿಸುವ ನಿಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ಹರಾಜು ಹಾಕುವುದು, ಇಲ್ಲವಾದರೆ ತಾಯಂದಿರ ಮೇಲೆ ಅತ್ಯಾಚಾರ ಎಸಗುವ ಬಗ್ಗೆ ಇಲ್ಲಿನ ದುಷ್ಟ ಜಾತಿ ಪಂಚಾಯತ್‌ಗಳು ಆದೇಶಿಸುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್​ಹೆಚ್​​ಆರ್​ಸಿ) ರಾಜಸ್ಥಾನ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ.

ಇಬ್ಬರ ನಡುವೆ ಹಣಕಾಸಿನ ವಹಿವಾಟು ಮತ್ತು ಸಾಲದ ವಿವಾದ ಉಂಟಾದಾಗ ಹಣ ಮರು ಪಾವತಿಸಲು 8ರಿಂದ 18 ವರ್ಷದೊಳಗಿನ ಬಾಲಕಿಯರನ್ನು ಹರಾಜು ಮಾಡಲಾಗುತ್ತದೆ. ಈ ಕುರಿತು ಸ್ಟ್ಯಾಂಪ್ ಪೇಪರ್‌ಗಳಲ್ಲೂ ಬರೆಸಿಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ. ಈ ವರದಿಯ ಆಧಾರದ ಮೇಲೆ ಎನ್‌ಎಚ್‌ಆರ್‌ಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಗುರುವಾರ ರಾಜ್ಯ ಸರ್ಕಾರಕ್ಕೆ ನೋಟಿಸ್​ ನೀಡಿದೆ.

ಜಾತಿ ಪಂಚಾಯತ್‌ಗಳಿಂದಲೇ ವಿಕೃತ ಆದೇಶ: ಅಕ್ಟೋಬರ್​ 26ರಂದು ಆದ ವರದಿಗಳ ಪ್ರಕಾರ, ಭಿಲ್ವಾಡ ಜಿಲ್ಲೆಯಲ್ಲಿ ಎರಡು ಪಕ್ಷಗಳ ನಡುವೆ ಯಾವುದೇ ರೀತಿಯ ವಿವಾದ ಉಂಟಾದಾಗ ಅವರು ಪೊಲೀಸ್​ ಠಾಣೆಗೆ ಹೋಗುವ ಬದಲು ಸಮಸ್ಯೆ ಇತ್ಯರ್ಥಕ್ಕಾಗಿ ಜಾತಿ ಪಂಚಾಯತ್‌ಗಳನ್ನು ಸಂಪರ್ಕಿಸುತ್ತಾರೆ. ಅಲ್ಲಿಂದಲೇ ಹೆಣ್ಣುಮಕ್ಕಳನ್ನು ಒತ್ತೆಯಾಳು ಹಾಗೂ ಗುಲಾಮಗಿರಿಗೆ ತಳ್ಳುವ, ಮಾರಾಟ ಮಾಡುವ ದುಷ್ಟ ಪ್ರಕ್ರಿಯೆ ಶುರುವಾಗುತ್ತದೆ. ಒಂದು ವೇಳೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲು ಒಪ್ಪದ್ದಿದ್ದರೆ, ಅವರ ತಾಯಂದಿರ ಮೇಲೆ ಅತ್ಯಾಚಾರಕ್ಕೆ ಜಾತಿ ಪಂಚಾಯತ್‌ಗಳು ಆದೇಶಿಸುತ್ತವೆ.

ಇತ್ತೀಚಿಗೆ 15 ಲಕ್ಷ ರೂಪಾಯಿ ಸಾಲವನ್ನು ತೀರಿಸುವ ಸಲುವಾಗಿ ಜಾತಿ ಪಂಚಾಯತ್ ವ್ಯಕ್ತಿಯೊಬ್ಬರಿಗೆ ಮೊದಲು ತನ್ನ ಸಹೋದರಿಯನ್ನು ಮಾರಾಟ ಮಾಡಲು ಆದೇಶಿಸಿತ್ತು. ಇದರ ನಂತರವೂ ಸಾಲ ತೀರದಿದ್ದಾಗ ಆತನಿಗೆ 12 ವರ್ಷದ ಮಗಳನ್ನೂ ಮಾರಾಟ ಮಾಡುವಂತೆ ಸೂಚಿಸಲಾಗಿತ್ತು. ಅಂತೆಯೇ, ಸಾಲ ಕೊಟ್ಟವನಿಗೆ ಆ ಹುಡುಗಿಯನ್ನು 8 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ಇಲ್ಲಿಗೆ ಈ ಸಾಲ ತೀರದ ಕಾರಣ ಎಲ್ಲ ಐವರು ಸಹೋದರಿಯರನ್ನೂ ಮಾರಾಟ ಮಾಡಿದ್ದ. ಆದರೂ, ಆತ ಸಾಲ ತೀರಿಲ್ಲ ಎಂದು ವರದಿಯಾಗಿದೆ.

ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಚಿಕಿತ್ಸೆಗಾಗಿ ತನ್ನ ಮನೆಯನ್ನು ಮಾರಿ, 6 ​​ಲಕ್ಷ ರೂ. ಸಾಲ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಾದ ನಂತರ ತನ್ನ ತಾಯಿಯ ಚಿಕಿತ್ಸೆಗಾಗಿಯೂ 6 ​​ಲಕ್ಷ ರೂ. ಸಾಲ ತೆಗೆದುಕೊಂಡಿದ್ದ. ಈ ಸಾಲ ತೀರಿಸಲು ತನ್ನ ಪುಟ್ಟ ಮಗಳನ್ನು 6 ಲಕ್ಷ ರೂ.ಗೆ ಮಾರಾಟ ಮಾಡಿದ್ದ. ಹೀಗೆ ಮೂರು ಬಾರಿ ಬಾಲಕಿಯನ್ನು ಮಾರಾಟ ಮಾಡಲಾಗಿತ್ತು. ನಂತರ ಬಾಲಕಿಯನ್ನು ಆಗ್ರಾಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆಕೆ ಅಲ್ಲಿ ಗರ್ಭಿಣಿಯಾಗಿದ್ದಳು ಎಂದು ವರದಿಗಳು ಹೇಳಿವೆ.

ವಿದೇಶಗಳಿಗೂ ಬಾಲಕಿಯರ ರವಾನೆ: ಇದೇ ರೀತಿಯಾಗಿ ಸಾಲಕ್ಕೆ ಪ್ರತಿಯಾಗಿ ಬಾಲಕಿಯರನ್ನು ಉತ್ತರ ಪ್ರದೇಶ, ಮಧ್ಯಪ್ರದೇಶ, ಮುಂಬೈ, ದೆಹಲಿ ಮತ್ತು ವಿದೇಶಗಳಿಗೂ ಕಳುಹಿಸಲಾಗುತ್ತದೆ. ಅಲ್ಲಿ ಗುಲಾಮಗಿರಿಯಲ್ಲಿರುವ ಬಾಲಕಿಯರನ್ನು ದೈಹಿಕ ದೌರ್ಜನ್ಯ, ಚಿತ್ರಹಿಂಸೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಲಾಗುತ್ತದೆ ಎಂದು ವರದಿಗಳು ಬಹಿರಂಗಪಡಿಸಿವೆ.

ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ನೋಟಿಸ್​: ಜಾತಿ ಪಂಚಾಯತ್‌ಗಳ ಆಘಾತಕಾರಿ ಆದೇಶಗಳ ಕುರಿತು ಅನೇಕ ಮಾಧ್ಯಮಗಳ ವರದಿಗಳನ್ನು ಗಮನಿಸಿರುವ ಎನ್​ಹೆಚ್​​ಆರ್​ಸಿ, ಇದು ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಅಲ್ಲದೇ, ಈ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ. ಜೊತೆಗೆ ಪೊಲೀಸ್ ಮಹಾನಿರ್ದೇಶಕರಿಗೂ ನೋಟಿಸ್ ನೀಡಲಾಗಿದೆ.

ಇದುವರೆಗೆ ವರದಿಯಾದ ಇಂತಹ ಘಟನೆಗಳಲ್ಲಿ ಎಫ್‌ಐಆರ್‌ ದಾಖಲಿಸಬೇಕು. ಚಾರ್ಜ್‌ಶೀಟ್ ಹಾಕಿ ಆರೋಪಿಗಳನ್ನು ಬಂಧಿಸಬೇಕೆಂದು ಎನ್​ಹೆಚ್​​ಆರ್​ಸಿ ಸೂಚಿಸಿದೆ. ಅಷ್ಟೇ ಅಲ್ಲ, ಇಂತಹ ಘಟನೆಗಳನ್ನು ಶಾಶ್ವತವಾಗಿ ತಡೆಗಟ್ಟುವುದನ್ನು ತೆಗೆದುಕೊಂಡ ಕ್ರಮಗಳ ಬಗ್ಗೆ ನಾಲ್ಕು ವಾರಗಳಲ್ಲಿ ಉತ್ತರಿಸಬೇಕೆಂದು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ತಾಕೀತು ಮಾಡಿದೆ.

ಇದರ ಜೊತೆಗೆ ಆಯೋಗವು ತನ್ನ ವಿಶೇಷ ಪ್ರತಿನಿಧಿ ಉಮೇಶ್ ಕುಮಾರ್ ಶರ್ಮಾ ಅವರಿಗೆ ರಾಜಸ್ಥಾನದ ಇಂತಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಕಳೆದ ಮೂರು ತಿಂಗಳ ನಡೆದ ಘಟನೆಗಳ ಕುರಿತು ವರದಿ ಸಲ್ಲಿಸುವಂತೆಯೂ ತಿಳಿಸಿದೆ.

ಇದನ್ನೂ ಓದಿ:ವಿಧವೆಯೊಂದಿಗೆ ಗಂಡನ ಚೆಲ್ಲಾಟ ಬಹಿರಂಗಗೊಳಿಸಿದ ಪತ್ನಿ.. ಪ್ರೇಮಿಗಳನ್ನು ಕಂಬಕ್ಕೆ ಕಟ್ಟಿ ಥಳಿಸಿದ ಜನ!

ABOUT THE AUTHOR

...view details