ಹೈದರಾಬಾದ್:ಹೈದರಾಬಾದ್ ನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಏಕಾಂಕಿಯಾಗಿ ಕಣಕ್ಕಿಳಿದಿದ್ದ ಬಿಜೆಪಿ ಅಚ್ಚರಿಯ ಫಲಿತಾಂಶ ಪಡೆದುಕೊಂಡು, ಟಿಆರ್ಎಸ್ಗೆ ಎಚ್ಚರಿಕೆ ಕರೆ ಗಂಟೆ ನೀಡಿದೆ. ಇನ್ನೊಂದೆಡೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ. ಅಷ್ಟೇ ಅಲ್ಲ ಟಿಪಿಸಿಸಿ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಇಲ್ಲಿಯವರೆಗೆ ನಡೆದ ಫಲಿತಾಂಶದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ 55+1 ವಾರ್ಡ್ಗಳ ಗೆಲುವು ಸಾಧಿಸಿದೆ. (1 ವಾರ್ಡ್ನಲ್ಲಿ ಮುನ್ನಡೆ) ಬಿಜೆಪಿ 48 ವಾರ್ಡ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಚ್ಚರಿಕೆಯ ಫಲಿತಾಂಶದತ್ತ ಮುನ್ನುಗ್ಗುತ್ತಿದೆ. ಕಾಂಗ್ರೆಸ್ ಕೇವಲ ಎರಡು ವಾರ್ಡ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರಿ ಮುಖಭಂಗ ಅನುಭವಿಸಿದೆ. ಎಂಐಎಂ 44 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ. 1 ಸ್ಥಾನಗಳ ಫಲಿತಾಂಶವಷ್ಟೇ ಬರಬೇಕಿದೆ.
ಇದನ್ನೂ ಓದಿ : ಜಿಹೆಚ್ಎಂಸಿ ಚುನಾವಣೆಗೆ ಒಲವು ತೋರದ ಮತದಾರ: ಅತ್ಯಲ್ಪ ಪ್ರಮಾಣದ ಮತದಾನ
ಒಟ್ಟು 150 ವಾರ್ಡ್ಗಳ ಬಲದ ಜಿಹೆಚ್ಎಂಸಿಗೆ ಕೊರೊನಾ ಹಿನ್ನೆಲೆಯಲ್ಲಿ ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಲಾಗಿತ್ತು. ಚುನಾವಣಾ ಕಣದಲ್ಲಿ ಒಟ್ಟು 1,122 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 30 ಮತ ಎಣಿಕೆ ಕೇಂದ್ರಗಳಲ್ಲಿ 8,152 ಸಿಬ್ಬಂದಿ ಮತ ಎಣಿಕೆಯಲ್ಲಿ ಭಾಗಿಯಾಗಿದ್ದರು.
ಈ ಬಾರಿಯ ಚುನಾವಣೆಯನ್ನು ಬಿಜೆಪಿ ಹಾಗೂ ಟಿಆರ್ಎಸ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದವು. ಇದರಂತೆ ಬಿಜೆಪಿಯ ಘಟಾನುಘಟಿ ನಾಯಕರು ಹೈದರಾಬಾದ್ನಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಅಮಿತ್ ಶಾ, ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ, ರಾಜ್ಯದ ಸಚಿವರಾದ ಸುಧಾಕರ್, ಈಶ್ವರಪ್ಪ ಸೇರಿದಂತೆ ಹಲವಾರು ನಾಯಕರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಬಿಜೆಪಿ ನಾಯಕರು ಹೈದರಾಬಾದ್ ಅನ್ನು ಭಾಗ್ಯನಗರವಾಗಿ ಮರುನಾಮಕರಣ ಮಾಡಲಾಗುತ್ತದೆ ಎಂದು ಹೇಳಿದ್ದು ಭಾರೀ ಕುತೂಹಲ ಕೆರಳಿಸುವಂತೆ ಮಾಡಿತ್ತು. ಚುನಾವಣಾ ಅಖಾಡದಲ್ಲಿ ಟಿಆರ್ಎಸ್, ಬಿಜೆಪಿ, ಎಂಐಎಂ, ಕಾಂಗ್ರೆಸ್ ಪಕ್ಷಗಳಿದ್ದವು.
ಅಚ್ಚರಿಯೆ ಫಲಿತಾಂಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ತೆಲಂಗಾಣ ಜನತೆಗೆ ಧನ್ಯವಾದ ಹೇಳಿದ್ದಾರೆ. ಇಂದು ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಶನ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಬಿಜೆಪಿ ರಾಜಕಾರಣದ ಮೇಲೆ ನಂಬಿಕೆ ಇಟ್ಟ ತೆಲಂಗಾಣ ಜನರಿಗೆ ಧನ್ಯವಾದಗಳು. ಜಿಹೆಚ್ಎಂಸಿ ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರಿಗೆ ಸುಸ್ವಾಗತ. ತೆಲಂಗಾಣ ಬಿಜೆಪಿ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸುತ್ತದೆ ಎಂದಿದ್ದಾರೆ.