ಕರ್ನಾಟಕ

karnataka

ETV Bharat / bharat

ಜೀವನದ ಅನಿಶ್ಚಿತತೆಗಳಿಂದ ರಕ್ಷಣೆಗೆ ಬೇಕು ವಿಮಾ ಪಾಲಿಸಿ..

ಜೀವನದ ಅನಿಶ್ಚಿತತೆಗಳನ್ನು ಎದುರಿಸಲು ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದಕ್ಕಿಂತ ಮುಖ್ಯವಾದದ್ದು ಯಾವುದೂ ಇಲ್ಲ ಎನಿಸುತ್ತದೆ. ಆತಂಕದಲ್ಲಿಯೇ ಕಾಲ ಕಳೆಯುವ ಬದಲು ಅಂಥ ಸನ್ನಿವೇಶಗಳಿಂದ ಪಾರಾಗಲು ನಾವು ಎಷ್ಟು ಸಮರ್ಥರಾಗಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಒಳಿತು. ಕೊರೊನಾ ನಂತರದ ಕಾಲದಲ್ಲಿ ಬಹುತೇಕರು ಆರ್ಥಿಕ ಸಬಲತೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೀಗಾಗಿಯೇ ಲೈಫ್ ಇನ್ಷೂರೆನ್ಸ್​ ಪಾಲಿಸಿಗಳತ್ತ ಜನರ ಗಮನ ಈಗ ಎಂದಿಗಿಂತಲೂ ಹೆಚ್ಚಾಗಿದೆ.

ಜೀವನದ ಅನಿಶ್ಚಿತತೆಗಳಿಂದ ರಕ್ಷಣೆಗಾಗಿ ಪಡೆದುಕೊಳ್ಳಿ ವಿಮಾ ಪಾಲಿಸಿ
Best insurance policies

By

Published : Sep 14, 2022, 2:21 PM IST

ಹೈದರಾಬಾದ್: ತಾವು ಜೀವವಿಮಾ ಪಾಲಿಸಿಯೊಂದನ್ನು ಪಡೆದುಕೊಳ್ಳಲು ಅರ್ಹತೆ ಹೊಂದಿದ್ದೇವಾ ಅಥವಾ ಇಲ್ಲ ಎಂಬುದು ವಯಸ್ಸಾದವರಿಗೆ ಕಾಡುವ ಪ್ರಮುಖ ಪ್ರಶ್ನೆಯಾಗಿದೆ. ಆದರೆ ಅವರು ಯಾವ ರೀತಿಯ ಪಾಲಿಸಿ ಪಡೆಯಲು ಬಯಸುತ್ತಿದ್ದಾರೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ.

ಹೌದು, ನಾವು ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ನಮ್ಮ ಅಗತ್ಯಗಳನ್ನು ನಿರ್ಣಯಿಸಬೇಕು. ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಪಾಲಿಸಿಗಳು ಸಾಕಾಗಬಹುದು. ಆದರೆ ರಕ್ಷಣೆಗೆ ಸೀಮಿತವಾಗಿರುವ ಟರ್ಮ್ ಪಾಲಿಸಿಗಳನ್ನು ಪಡೆಯುವುದು ಸ್ವಲ್ಪ ಕಷ್ಟ. ಆದಾಗ್ಯೂ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ ಹೆಚ್ಚಿನ ಪ್ರೀಮಿಯಂ ಪಾವತಿಸಿ ಪಾಲಿಸಿಗಳನ್ನು ತೆಗೆದುಕೊಳ್ಳಬಹುದು. ಯಾರೇ ಆದರೂ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳಿಂದ ಬಳಲುತ್ತಿದ್ದರೂ ಸಹ, ಪ್ರೀಮಿಯಂ ಲೋಡಿಂಗ್​ಗೆ ಕೆಲ ಮಿತಿಗಳನ್ನು ವಿಧಿಸಲಾಗಿರುತ್ತದೆ. ಹಾಗಾಗಿ ವಯಸ್ಸಾಗಿದ್ದರೂ ತಪ್ಪದೆ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳಬೇಕು.

ಆಯ್ಕೆ ವೇಳೆ ಜಾಗರೂಕತೆ ಇರಲಿ.. ಜೀವ ವಿಮಾ ಪಾಲಿಸಿಗಳನ್ನು ಆಯ್ಕೆಮಾಡುವಾಗ ನಾವು ಬಹಳ ಜಾಗರೂಕರಾಗಿರಬೇಕು. ಜೀವ ವಿಮಾ ಪಾಲಿಸಿಗಳಲ್ಲಿ ಸಾಕಷ್ಟು ವಿಧಗಳಿವೆ. ಕೆಲವು ಕೇವಲ ರಕ್ಷಣೆಗೆ ಸೀಮಿತವಾಗಿದ್ದರೆ ಇನ್ನೂ ಕೆಲವು ದೀರ್ಘಾವಧಿ ಹೂಡಿಕೆಗಳನ್ನು ಮಾಡಲು ಸಹಾಯ ಮಾಡುತ್ತವೆ. ಕೆಲವು ಯೋಜನೆಗಳು ನಿವೃತ್ತಿಯ ನಂತರ ಪಿಂಚಣಿಗಳನ್ನು ಒದಗಿಸುತ್ತವೆ. ಇನ್ನೂ ಕೆಲ ಪಾಲಿಸಿಗಳು ಷೇರು ಮಾರುಕಟ್ಟೆಯನ್ನು ಆಧರಿಸಿವೆ. ಜೀವಿತಾವಧಿಯವರೆಗೂ ರಕ್ಷಣೆ ನೀಡುವ ಪಾಲಿಸಿಗಳೂ ಸಹ ಇವೆ. ಆದ್ದರಿಂದ ವಿಮಾ ಯೋಜನೆಗಳನ್ನು ಎಲ್ಲಾ ಸಮಯದಲ್ಲೂ ಯಾವುದೋ ಒಂದು ಹೂಡಿಕೆ ಯೋಜನೆ ಅಥವಾ ಇನ್ನೊಂದು ಪಾಲಿಸಿಗೆ ಹೋಲಿಸಲಾಗುವುದಿಲ್ಲ. ಹಾಗೆಯೇ ಒಂದು ನಿರ್ದಿಷ್ಟ ವರ್ಗದಲ್ಲಿನ ಒಂದು ಪಾಲಿಸಿಯನ್ನು ಬೇರೆ ವರ್ಗದಲ್ಲಿರುವ ಇನ್ನೊಂದು ಪಾಲಿಸಿಗೆ ಹೋಲಿಸಲಾಗುವುದಿಲ್ಲ.

ಸಾಮಾನ್ಯವಾಗಿ, ಜೀವ ವಿಮಾ ಪಾಲಿಸಿಗಳು ದೀರ್ಘಾವಧಿಯ ಯೋಜನೆಗಳಾಗಿವೆ. ಪಾಲಿಸಿದಾರರು ಪಾವತಿಸುವ ಪ್ರೀಮಿಯಂಗಳ ಮೇಲೆ ಅವರಿಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಪಾಲಿಸಿದಾರರಿಗೆ ಅನಿರೀಕ್ಷಿತವಾಗಿ ಏನಾದರೂ ಸಂಭವಿಸಿದರೆ ವಿಮಾ ಕಂಪನಿಯು ಪರಿಹಾರವನ್ನು ಸಹ ನೀಡುತ್ತದೆ. ಆದರೆ ಇಂಥ ಸೌಲಭ್ಯಗಳು ಹೂಡಿಕೆ ಆಧಾರಿತ ಯೋಜನೆಗಳಲ್ಲಿ ಇರುವುದಿಲ್ಲ.

ಜೀವ ರಕ್ಷಣೆ ಮತ್ತು ದೀರ್ಘಾವಧಿಯ ಹೂಡಿಕೆ..ಹೀಗೆ ಯುನಿಟ್ ಲಿಂಕ್ಡ್ ಹೂಡಿಕೆ ಯೋಜನೆಗಳು (ULIP ಗಳು) ಎರಡು ಉದ್ದೇಶಗಳನ್ನು ಸಾಧಿಸಲು ಉಪಯುಕ್ತವಾಗಿವೆ. ಹೊಸ ಯುಲಿಪ್ ಯೋಜನೆಗಳಲ್ಲಿ ಪ್ರೀಮಿಯಂ ಪಾವತಿಗಳು ತುಲನಾತ್ಮಕವಾಗಿ ಕಡಿಮೆಯಾಗಿರುತ್ತವೆ. ಅಲ್ಲದೆ ಜೀವನದಲ್ಲಿ ಅನಿರೀಕ್ಷಿತ ವೆಚ್ಚಗಳು ಎದುರಾದರೆ ನಾವು ಭಾಗಶಃ ಮೊತ್ತವನ್ನು ಹಿಂಪಡೆಯಬಹುದು.

ಕ್ಲೈಮ್‌ಗಳ ಪಾವತಿಯಲ್ಲಿ ಅಡೆತಡೆಗಳನ್ನು ಎದುರಾದರೆ ಪಾಲಿಸಿದಾರರು ಏನು ಮಾಡಬೇಕು?.. ವಿಮಾ ಸಂಸ್ಥೆಯು ಪರಿಹಾರ ಪಾವತಿಸಲು ತಿರಸ್ಕರಿಸಿದರೆ ಏನು ಮಾಡಬೇಕು? ಪಾಲಿಸಿದಾರರಿಗೆ ಏನಾದರೂ ಸಂಭವಿಸಿದರೆ ಪಾಲಿಸಿಯಲ್ಲಿ ನಿರ್ಧರಿಸಿದಂತೆ ಪರಿಹಾರವನ್ನು ಪಾವತಿಸುವುದು ವಿಮಾ ಕಂಪನಿಯ ಮೂಲ ಕರ್ತವ್ಯವಾಗಿದೆ. ಒಂದು ಪಾಲಿಸಿಯು ಪಾಲಿಸಿದಾರ ಮತ್ತು ಕಂಪನಿಯ ನಡುವಿನ ನಂಬಿಕೆಯ ಒಪ್ಪಂದವಾಗಿದೆ.

ಆದ್ದರಿಂದ ಪಾಲಿಸಿಯನ್ನು ತೆಗೆದುಕೊಳ್ಳುವ ವ್ಯಕ್ತಿಯು ಅಗತ್ಯವಿರುವ ಎಲ್ಲ ವಿವರಗಳನ್ನು ಒದಗಿಸಬೇಕು. ಆರೋಗ್ಯ, ಆರ್ಥಿಕ ಪರಿಸ್ಥಿತಿ ಮತ್ತು ಅಭ್ಯಾಸಗಳ ಬಗ್ಗೆ ವಿವರಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಬೇಕು. ಯಾವುದೇ ಡೀಫಾಲ್ಟ್ ಇಲ್ಲದೆ ಪ್ರೀಮಿಯಂ ಪಾವತಿಗಳು ನಿಯಮಿತವಾಗಿರಬೇಕು. ಈ ಎಲ್ಲಾ ವಿವರಗಳನ್ನು ಸರಿಯಾಗಿ ನೀಡಿದ್ದರೆ, ಕ್ಲೈಮ್ ಸಮಯದಲ್ಲಿ ಪರಿಹಾರ ಪಡೆಯಲು ವಿಳಂಬವಾಗುವುದನ್ನು ತಪ್ಪಿಸಬಹುದು. ಇಂದಿನ ಡಿಜಿಟಲ್ ಯುಗದಲ್ಲಿ, ಕ್ಲೈಮ್‌ಗಳ ಪಾವತಿಗಳು ಯಾವುದೇ ಗೊಂದಲವಿಲ್ಲದೆ ವೇಗವಾಗಿ ಆಗುತ್ತಿವೆ.

ವ್ಯಕ್ತಿಗಳು ಮತ್ತು ಕುಟುಂಬಗಳ ಹಣಕಾಸಿನ ಅಗತ್ಯಗಳು ಯಾವಾಗಲೂ ವಿಭಿನ್ನವಾಗಿರುತ್ತವೆ. ಅವು ಎಂದಿಗೂ ಒಂದೇ ರೀತಿ ಆಗಿರುವುದಿಲ್ಲ. ಒಬ್ಬ ವ್ಯಕ್ತಿಗೆ ಉತ್ತಮವಾದ ವಿಷಯವು ಇನ್ನೊಬ್ಬರಿಗೆ ಉತ್ತಮ ಎನಿಸದಿರಬಹುದು. ಇದನ್ನು ಪರಿಗಣಿಸಿ, ನಿಮ್ಮ ಹಣಕಾಸಿನ ಅಗತ್ಯತೆ ಮತ್ತು ಭವಿಷ್ಯದ ಉದ್ದೇಶಗಳ ಆಧಾರದ ಮೇಲೆ ವಿಮಾ ಪಾಲಿಸಿಗಳನ್ನು ಆಯ್ಕೆ ಮಾಡಬೇಕು. ಇದರಲ್ಲಿ ಯಾವುದೇ ಸಂದೇಹಗಳಿದ್ದಲ್ಲಿ ನಾವು ತಜ್ಞರ ಸಲಹೆಯನ್ನು ಪಡೆಯಬಹುದು. ಅನಿಶ್ಚಿತತೆಗಳು ಮತ್ತು ಕಠಿಣ ಸಮಯಗಳಲ್ಲಿ ಸರಿಯಾಗಿ ಆಯ್ಕೆಮಾಡಿದ ಪಾಲಿಸಿ ಮಾತ್ರ ನಿಮ್ಮ ರಕ್ಷಣೆಗೆ ಬರುತ್ತದೆ ಎಂದು ಇಂಡಿಯಾಫಸ್ಟ್ ಲೈಫ್ ಇನ್ಶೂರೆನ್ಸ್ ಕಂಪನಿಯ ಎಂಡಿ ಮತ್ತು ಸಿಇಒ ಆರ್.ಎಂ. ವಿಶಾಖ ಹೇಳುತ್ತಾರೆ.

ಇದನ್ನೂ ಓದಿ: ಸಮಗ್ರ ವಿಮಾ ಪಾಲಿಸಿ ಮತ್ತು ರೀಫಿಲ್.. ಆಸ್ಪತ್ರೆಗೆ ದಾಖಲಾದರೆ ಇದೇ ಸಂಜೀವಿನಿ

ABOUT THE AUTHOR

...view details