ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿದ್ದರ ವಿರುದ್ಧ ಅಮೆರಿಕ ಪ್ರತಿಕ್ರಿಯಿಸಿದ ಬಳಿಕ ಇದೀಗ ಜರ್ಮನಿ ಕೂಡ ಈ ಬಗ್ಗೆ ಮಾತನಾಡಿದೆ. ರಾಹುಲ್ ಅನರ್ಹ ಪ್ರಕರಣವನ್ನು ಗಮನಿಸುತ್ತಿರುವುದಾಗಿ ಆ ದೇಶದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.
"ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧದ ಅನರ್ಹತೆ ಪ್ರಕರಣವನ್ನು ನಾವು ಗಮನಿಸಿದ್ದೇವೆ. ರಾಹುಲ್ ಅವರು ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಿದ್ಧತೆಯಲ್ಲಿದ್ದಾರೆ" ಎಂದು ಜರ್ಮನ್ ವಿದೇಶಾಂಗ ಸಚಿವಾಲಯದ ವಕ್ತಾರ ನೀಡಿರುವ ಹೇಳಿಕೆಯನ್ನು ಸರ್ಕಾರಿ ಸ್ವಾಮ್ಯದ ಮಾಧ್ಯಮದಲ್ಲಿ ಪ್ರಸಾರವಾಗಿದೆ.
"ಮೇಲ್ಮನವಿ ಸಲ್ಲಿಸಿದ ಬಳಿಕ ಈ ತೀರ್ಪು ನಿಲ್ಲುತ್ತದೆಯೇ ಅಥವಾ ಆದೇಶ ಅಮಾನತಾಗುತ್ತದೆಯೇ ಎಂಬುದು ನಂತರ ಸ್ಪಷ್ಟವಾಗುತ್ತದೆ. ನ್ಯಾಯಾಂಗವು ಅಭಿವ್ಯಕ್ತಿ ಸ್ವಾತಂತ್ರ್ಯದ ಮಾನದಂಡಗಳು ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಪ್ರಕರಣದಲ್ಲಿ ಪರಿಗಣಿಸುತ್ತದೆ ಎಂಬ ನಿರೀಕ್ಷೆ ಇದೆ" ಎಂದು ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅಮೆರಿಕ ಸರ್ಕಾರದ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಅವರು, ಭಾರತೀಯ ಕೋರ್ಟ್ನಲ್ಲಿ ರಾಹುಲ್ ಗಾಂಧಿ ಅವರ ಪ್ರಕರಣವನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ. ಕಾನೂನು ಮತ್ತು ಸ್ವಾತಂತ್ರ್ಯ ನ್ಯಾಯಾಂಗ ಯಾವುದೇ ದೇಶದ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣವಾಗಿದೆ. ಕೋರ್ಟ್ನಲ್ಲಿರುವ ರಾಹುಲ್ ಗಾಂಧಿ ಅನರ್ಹ ಪ್ರಕರಣವನ್ನು ಗಮನಿಸಲಾಗುವುದು. ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಸತ್ತಾತ್ಮಕ ಮೌಲ್ಯಗಳ ಆಧಾರದ ಮೇಲೆ ಅಮೆರಿಕವು ಭಾರತ ಸರ್ಕಾರದೊಂದಿಗೆ ನಿಲ್ಲುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಟ್ವಿಟರ್ನಲ್ಲಿ ಫೈಟ್:ರಾಹುಲ್ ಗಾಂಧಿ ವಿಚಾರವನ್ನು ಜರ್ಮನಿ ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಧನ್ಯವಾದ ಹೇಳಿದ್ದಾರೆ. ಜರ್ಮನಿ ವಕ್ತಾರರ ಹೇಳಿಕೆಯ ವಿಡಿಯೋವನ್ನು ಹಂಚಿಕೊಂಡು, "ಜರ್ಮನಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ರಿಚರ್ಡ್ ವಾಕರ್ ಅವರಿಗೆ ಧನ್ಯವಾದಗಳು. ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಹುಲ್ ಗಾಂಧಿಯವರಿಗೆ ಕಿರುಕುಳ ನೀಡಲಾಗುತ್ತಿದೆ" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.