ನವದೆಹಲಿ :ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಒಂದು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಛತ್ತೀಸ್ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಲಭಿಸಿದ್ದು, ತೆಲಂಗಾಣದಲ್ಲಿ ಮಾತ್ರ ಮತದಾರ ಕಾಂಗ್ರೆಸ್ ಕೈ ಹಿಡಿದಿದ್ದಾನೆ. ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ಈಗಾಗಲೇ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿದೆ. ರಾಜಸ್ಥಾನದಲ್ಲಿ ನಾಳೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಹಿರಿಯ ನಾಯಕರ ಭವಿಷ್ಯ ನಿರ್ಧರಿಸಲಿರುವ ಖರ್ಗೆ :ಇನ್ನೊಂದೆಡೆ ಕಳೆದ 2018ರಲ್ಲಿ ಮೂರು ರಾಜ್ಯಗಳಲ್ಲೂ ಗೆದ್ದು ಬೀಗಿದ್ದ ಕಾಂಗ್ರೆಸ್, ಇದೀಗ ಮೂರು ರಾಜ್ಯಗಳಲ್ಲೂ ಅಸ್ತಿತ್ವ ಕಳೆದುಕೊಂಡಿದೆ. ಈ ಸಂಬಂಧ ತಮ್ಮ ಸೋಲನ್ನು ಪರಾಮರ್ಶಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹಿರಿಯ ನಾಯಕರಾದ ಕಮಲ್ನಾಥ್, ಭೂಪೇಶ್ ಬಘೇಲ್ ಮತ್ತು ಅಶೋಕ್ ಗೆಹ್ಲೋಟ್ ಅವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ರಾಜಸ್ಥಾನ ಮತ್ತು ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ ಮತ್ತು ಭೂಪೇಶ್ ಬಘೇಲ್ ಹಾಗೂ ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್ನಾಥ್ ಅವರು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದರೆ, ನಿರೀಕ್ಷೆ ಹುಸಿಯಾಗಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಮಧ್ಯೆ ಪರಿಸ್ಥಿತಿ ಬದಲಾವಣೆ ಆಗಿದೆ.
ಸೋಲಿಗೆ ಹೊಣೆಗಾರಿಕೆ ನಿಗದಿಪಡಿಸದ ಕಾಂಗ್ರೆಸ್ :ಇನ್ನು ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿರುವುದಕ್ಕೆ ಈವರೆಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಲಾಗಿಲ್ಲ. ಇದು ಪಕ್ಷದ ಒಳಗೆ ಒಂದು ತಪ್ಪು ಸಂದೇಶ ರವಾನಿಸುವ ಸಾಧ್ಯತೆ ಇದೆ. ಒಂದು ವೇಳೆ ಈ ಹಿರಿಯ ನಾಯಕರನ್ನು ಹೊಣೆಗಾರರನ್ನಾಗಿ ಮಾಡಿ, ಯುವ ನಾಯಕತ್ವಕ್ಕೆ ಮಣೆ ಹಾಕಿದರೆ ಇದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಭಯ ಇದೆ. ಅಲ್ಲದೆ ಖರ್ಗೆ ಅವರು ಮೂರು ರಾಜ್ಯಗಳಲ್ಲೂ ಕಾಂಗ್ರೆಸ್ ಸೋಲು ಕಂಡಿರುವ ಬಗ್ಗೆ ಹಿರಿಯ ನಾಯಕರಿಂದ ವಿವರಣೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.