ನವದೆಹಲಿ: ಪಂಚ ರಾಜ್ಯಗಳ ಸೋಲಿನ ಬಳಿಕ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನದ ಬೇಗುದಿ ಹೆಚ್ಚಾಗುತ್ತಲೇ ಇದ್ದು, ಭಿನ್ನಮತೀಯರಾದ 'ಜಿ-23' ಬಳಗದ ಬಲ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಸೋಲಿನ ಬಗ್ಗೆ ಚರ್ಚಿಸಲು ಈ ನಾಯಕರು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಕುತೂಹಲಕಾರಿ ಸಂಗತಿ ಎಂದರೆ 'ಜಿ 23' ನಾಯಕರಲ್ಲದೇ ಮಣಿಶಂಕರ್ ಅಯ್ಯರ್ ಮತ್ತು ಪ್ರಣೀತ್ ಕೌರ್ ಹಾಗೂ ಶಶಿ ತರೂರು ಸೇರಿದಂತೆ ಕೆಲವು ಪಕ್ಷದ ಭಿನ್ನಮತೀಯರೂ ಈ ಸಭೆಯಲ್ಲಿ ಭಾಗವಹಿಸಿದ್ದರು. ಸುಮಾರು 4 ಗಂಟೆಗಳ ಕಾಲ ಸಭೆ ನಡೆದರೂ ಫಲಿತಾಂಶದ ಬಗ್ಗೆ ಯಾವುದೇ ನಾಯಕರು ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ. ಆದರೂ 2024ರ ಸಾರ್ವತ್ರಿಕ ಚುನಾವಣೆಯ ತಯಾರಿಗಾಗಿ ಪಕ್ಷವು ಸಾಮೂಹಿಕ ನಾಯಕತ್ವದ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಸೂಚಿಸುವ ಹೇಳಿಕೆಯನ್ನು ಕಾಂಗ್ರೆಸ್ ಭಿನ್ನಮತೀಯರ ಗುಂಪು ಬಿಡುಗಡೆ ಮಾಡಿದೆ.
ನಾವು ಕಾಂಗ್ರೆಸ್ ಪಕ್ಷದ ಸದಸ್ಯರು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿನ ನಿರಾಶಾದಾಯಕ ಫಲಿತಾಂಶ, ನಮ್ಮ ಕಾರ್ಯಕರ್ತರು ಮತ್ತು ನಾಯಕರ ನಿರಂತರ ವಲಸೆಯ ಬಗ್ಗೆ ಚರ್ಚಿಸಲು ಪರಸ್ಪರ ಭೇಟಿಯಾಗಿದ್ದೆವು. ಎಲ್ಲಾ ಹಂತಗಳಲ್ಲಿ ಸಾಮೂಹಿಕ ಮತ್ತು ಅಂತರ್ಗತ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಮಾದರಿಯನ್ನು ಕಾಂಗ್ರೆಸ್ ಅಳವಡಿಸಿಕೊಳ್ಳುವುದು ಒಂದೇ ದಾರಿ ಎಂಬುದನ್ನು ನಾವು ನಂಬುತ್ತೇವೆ ಎಂದು ಜಿ-23 ನಾಯಕರು ಪ್ರತಿಪಾದಿಸಿದ್ದಾರೆ.