ಕರ್ನಾಟಕ

karnataka

ETV Bharat / bharat

ಸಂಸತ್​ನಲ್ಲಿ ವಿಪಕ್ಷಗಳ ಪ್ರಶ್ನೆಗಳಿಗೆ ಮೋದಿ - ಶಾ ಯಾಕೆ ಉತ್ತರಿಸಲಿಲ್ಲ: ಡೆರೆಕ್ ಒಬ್ರೇನ್

ಸಂಸತ್​ನಲ್ಲಿ ವಿಪಕ್ಷಗಳು ಕೇಳಿದ ಪ್ರಶ್ನೆಗಳಿಗೆ ಮೋದಿ, ಅಮಿತ್ ಶಾ ಯಾಕೆ ಉತ್ತರಿಸಲಿಲ್ಲ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಡೆರೆಕ್ ಒಬ್ರೇನ್ ಪ್ರಶ್ನಿಸಿದ್ದಾರೆ.

derek-obrien
ಡೆರೆಕ್ ಒಬ್ರೇನ್

By

Published : Aug 12, 2021, 8:18 PM IST

ನವದೆಹಲಿ:ಸಂಸತ್ತಿನ ಮುಂಗಾರು ಅಧಿವೇಶನದ ಕಾರ್ಯವೈಖರಿ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೃಣಮೂಲ ಕಾಂಗ್ರೆಸ್ ವಕ್ತಾರ ಡೆರೆಕ್ ಒಬ್ರೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾಗೆ ಯಾಕೆ ಸಮಯ ಸಿಗಲಿಲ್ಲ. ಅತ್ಯಂತ ಪ್ರಮುಖವಾದ ಒಬಿಸಿ ಮಸೂದೆಯ ಚರ್ಚೆಗೂ ಯಾಕೆ ಅವಕಾಶ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಸಂಸತ್ತಿನಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸದೆ, ಪ್ರಧಾನಮಂತ್ರಿ ಮತ್ತು ಗೃಹ ಸಚಿವರು ಎಲ್ಲಿ ಹೋಗಿದ್ದರು. ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ಯಾಕೆ ಒಂದೆರಡು ನಿಮಿಷ ಸಮಯಾವಕಾಶ ಸಿಗಲಿಲ್ಲ ಎಂದು ಡೆರೆಕ್ ಒಬ್ರೇನ್ ಕಿಡಿಕಾರಿದರು.

ನಮ್ಮ ದೇಶದ ಆಂತರಿಕ ಭದ್ರತೆ ವಿಚಾರವಾಗಿ ಚರ್ಚೆ ಬಯಸಿದ್ದೆವು. ಆದರೆ, ಪ್ರಧಾನಿ ಹಾಗೂ ಅಮಿತ್ ಶಾ ಉತ್ತರಿಸದೇ ಯಾಕೆ ಓಡಿ ಹೋದರು. ಸಂಸತ್​ನಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಯಾಕೆ ಹಿಂದೇಟು ಹಾಕಿದರು ಎಂದು ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೇ ಒಟ್ಟು 39 ಮಸೂದೆಗಳನ್ನು ಅಂಗೀಕರಿಸಲಾಗಿದೆ.

ಪ್ರಜಾಪ್ರಭುತ್ವ ರಾಷ್ಟ್ರವೊಂದು ಈ ರೀತಿ ಕೆಲಸ ಮಾಡುವುದು ಸಮಂಜಸವಲ್ಲ. ಮಸೂದೆ ಅಂಗೀಕರಿಸುವ ಮುನ್ನ ಆಡಳಿತ ಪಕ್ಷವು ವಿಪಕ್ಷಗಳೊಂದಿಗೆ ಚರ್ಚಿಸಬೇಕಿತ್ತು ಎಂದರು. 2014 ರಲ್ಲಿ ಕೂಡ ಶೇಕಡಾ 60-70 ರಷ್ಟು ಬಿಲ್‌ಗಳನ್ನು ಸಂಸದೀಯ ಸಮಿತಿಯ ಪರಿಶೀಲನೆಗೆ ಕಳುಹಿಸಲಾಗಿತ್ತು. ಈಗ ಕೇವಲ ಶೇಕಡಾ 11 ರಷ್ಟು ಬಿಲ್​ಗಳನ್ನು ಮಾತ್ರ ಕಳಿಸಲಾಗಿದೆ ಎಂದು ಡೆರೆಕ್ ಒಬ್ರೇನ್ ಆರೋಪಿಸಿದ್ದಾರೆ.

ಸ್ವಾತಂತ್ರ್ಯ ಬಂದ ಮೊದಲ 30 ವರ್ಷಗಳಲ್ಲಿ ಪ್ರತಿ 10 ಮಸೂದೆಗಳಲ್ಲಿ ಕೇವಲ 1 ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗುತ್ತಿತ್ತು. ಈಗ ಪ್ರತಿ 10 ಮಸೂದೆಗಳಲ್ಲಿ ಸುಮಾರು 4 ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗುತ್ತಿದೆ. ಬಿಜೆಪಿ ಸರ್ಕಾರವು ತುರ್ತು ಶಾಸನವನ್ನು ಸಾಮಾನ್ಯ ಶಾಸನದಂತೆ ಪರಿಗಣಿಸುತ್ತಿದೆ ಎಂದು ದೂರಿದರು.

ಇದನ್ನೂ ಓದಿ: Explainer: 2021ರ ಮುಂಗಾರು ಅಧಿವೇಶನದ ಕಾರ್ಯ - ಕಲಾಪ ಹೇಗಿತ್ತು?

ಒಬಿಸಿ ಮಸೂದೆ ಮಂಡನೆ ದಿನ ಪ್ರಧಾನಿ ನರೇಂದ್ರ ಮೋದಿ ಯಾಕೆ ಸಂಸತ್ ಬರಲಿಲ್ಲ. ಅವರು ಬಾರದೇ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು? ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಪ್ರಧಾನ ಮಂತ್ರಿಗಳು ಸಂಸತ್ತಿನಲ್ಲಿ ಒಂದೇ ಒಂದು ಪ್ರಶ್ನೆಗೆ ಉತ್ತರಿಸಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ 21 ಪ್ರಶ್ನೆಗಳಿಗೆ ಉತ್ತರಿಸಿದ್ದರು. ನಾವು ಅಧಿವೇಶನಕ್ಕೆ ಯಾಕೆ ಅಡ್ಡಿಪಡಿಸಿದ್ದೆವು ಎಂದು ಪ್ರಶ್ನಿಸುವ ಬದಲು, ನಮ್ಮ ಪ್ರಶ್ನೆಗಳಿಗೆ ಸರ್ಕಾರ ಯಾಕೆ ಉತ್ತರಿಸಲಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿಬೇಕು ಎಂದು ಆಗ್ರಹಿಸಿದ್ರು.

ABOUT THE AUTHOR

...view details