ನವದೆಹಲಿ:ಕೇಂದ್ರ ಸರ್ಕಾರ ಮೊದಲೇ ಘೋಷಿಸಿದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಒಂದು ವರ್ಷದವರೆಗೆ ಉಚಿತವಾಗಿ ಪಡಿತರ ವಿತರಿಸುವ ಯೋಜನೆ ಇಂದಿನಿಂದಲೇ ಜಾರಿಯಾಗಲಿದೆ. ಇದು ವರ್ಷದ ಕೊನೆಯವರೆಗೂ(ಡಿಸೆಂಬರ್ 31) ಇರಲಿದೆ. ಇದರ ಲಾಭ ದೇಶದ 81.35 ಕೋಟಿ ಫಲಾನುಭವಿಗಳಿಗೆ ಸಿಗಲಿದೆ.
ಜನರಿಗೆ ಒಂದು ವರ್ಷ ಉಚಿತ ಆಹಾರ ಧಾನ್ಯ ನೀಡುವ ಬಗ್ಗೆ ಕೇಂದ್ರ ಸಚಿವ ಸಂಪುಟ ನಿರ್ಧರಿಸಿತ್ತು. ಇದಕ್ಕಾಗಿ ವಾರ್ಷಿಕವಾಗಿ 2 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಖರ್ಚಾಗಲಿದೆ. ಇದನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಆಹಾರ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾ ಕಾರಣಕ್ಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದ ಸೌಲಭ್ಯವನ್ನು ಎನ್‌ಎಫ್‌ಎಸ್‌ಎ ಅಡಿಯಲ್ಲಿ ವಿಸ್ತರಿಸಲಾಗಿದೆ. ಇದು ಫಲಾನುಭವಿಗಳನ್ನು ಸ್ಪಷ್ಟವಾಗಿ ಗುರುತಿಸಿ ಅವರಿಗೆ ಯೋಜನೆಯ ಲಾಭ ಸಿಗುವಂತೆ ಮಾಡಲಿದೆ ಎಂಬುದು ಕೇಂದ್ರದ ಅಭಿಪ್ರಾಯವಾಗಿದೆ.
ಯಾರಿಗೆ ಎಷ್ಟೆಷ್ಟು ಸೌಲಭ್ಯ?:ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿಯಲ್ಲಿ ಬರುವ ಕುಟುಂಬಗಳು ಪ್ರತಿ ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯಲಿವೆ. ಎನ್‌ಎಫ್‌ಎಸ್‌ಎ ಅಡಿಯಲ್ಲಿ ಬಡವರಿಗೆ ಒಂದು ಕೆಜಿ ಅಕ್ಕಿಯನ್ನು 3 ರೂ.ಗೆ ಮತ್ತು ಕೆಜಿ ಗೋಧಿಯನ್ನು 2 ರೂ. ಗೆ ನೀಡಲಾಗುತ್ತದೆ. ದೇಶಾದ್ಯಂತ 5.33 ಲಕ್ಷ ನ್ಯಾಯಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಪಡಿತರ ವಿತರಣೆ ಮಾಡಲಾಗುತ್ತದೆ.
ಯೋಜನೆಯ ಅನುಷ್ಠಾನಕ್ಕಾಗಿ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮೂರು ಪಡಿತರ ಅಂಗಡಿಗಳಿಗೆ ಪ್ರತಿದಿನ ಕಡ್ಡಾಯವಾಗಿ ಭೇಟಿ ನೀಡಿ ವರದಿಯನ್ನು ಸಲ್ಲಿಸಬೇಕು. ಆಹಾರ ಧಾನ್ಯ ವಿತರಿಸುವ ಡೀಲರ್ನ ಕಾರ್ಯವಿಧಾನದ ಬಗ್ಗೆ ನಿಗಾ ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.