ತಿರುವನಂತಪುರ/ಚೆನ್ನೈ:ಕೇರಳದ ಸಿಪಿಎಂಐನ ಮಾಜಿ ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ (69) ನಿಧನರಾಗಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ.
ಕ್ಯಾನ್ಸರ್‌ಗೆ ಕೊಡಿಯೇರಿ ಬಾಲಕೃಷ್ಣನ್ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿಗೆ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಚೆನ್ನೈನ ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದ್ದರು. ಕೊಡಿಯೇರಿ ಅವರು ತಮ್ಮ ಅನಾರೋಗ್ಯದ ಕಾರಣ ಇದೇ ಆಗಸ್ಟ್ 28ರಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಮರುದಿನವೇ ವಿಶೇಷ ಚಿಕಿತ್ಸೆಗಾಗಿ ಚೆನ್ನೈ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
1980ರಿಂದ 1982 ರವರೆಗೆ ಡಿವೈಎಫ್‌ಐ ಜಿಲ್ಲಾಧ್ಯಕ್ಷರಾಗಿದ್ದ ಕೊಡಿಯೇರಿ ಅವರು, ಪಿಣರಾಯಿ ವಿಜಯನ್ ನಂತರ 2015ರ ಫೆ.23ರಂದು ಸಿಪಿಎಂ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಸತತ ಮೂರು ಬಾರಿ ಈ ಹುದ್ದೆಯಲ್ಲಿದ್ದರು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಪಿಎಂ ಎರಡನೇ ಬಾರಿಗೆ ಆಡಳಿತ ಪಕ್ಷವಾದಾಗಲೂ ಅವರೇ ಪಕ್ಷದ ಕಾರ್ಯದರ್ಶಿಯಾಗಿದ್ದರು.
2011ರಿಂದ 2016ರವರೆಗೆ ವಿಧಾನಸಭೆಯಲ್ಲಿ ಕೊಡಿಯೇರಿ ವಿರೋಧ ಪಕ್ಷದ ಉಪನಾಯಕರಾಗಿಯೂ ಕೆಲಸ ಮಾಡಿದ್ದರು. 2006ರಿಂದ 2011ರವರೆಗೆ ಗೃಹ, ಪ್ರವಾಸೋದ್ಯಮ ಸೇರಿ ವಿವಿಧ ಖಾತೆಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅವರು ಹದಿನಾರು ತಿಂಗಳ ಸೆರೆವಾಸ ಅನುಭವಿಸಿದ್ದರು.
ಇದನ್ನೂ ಓದಿ:ನಕ್ಸಲ್ ಪೀಡಿತ ಗ್ರಾಮದ Inspiring story.. ನಕ್ಸಲ್ 'ಮಾವ' ಸ್ಫೋಟಿಸಿದ ಶಾಲೆಯಲ್ಲಿ ಸೊಸೆ ಶಿಕ್ಷಕಿ!