ಸಾಂಗ್ಲಿ(ಮಹಾರಾಷ್ಟ್ರ):ಸಮತಾ ಆಶ್ರಮ ಶಾಲೆಯ ಮಕ್ಕಳು ಭಾನುವಾರ ರಾತ್ರಿ ಊಟ ಮಾಡಿದ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಾಂಗ್ಲಿ - ಜತ್ತ ತಾಲೂಕಿನ ಉಮಡಿಯಲ್ಲಿ ನಡೆದಿದೆ. ಒಟ್ಟು 170 ವಿದ್ಯಾರ್ಥಿಗಳು ಆಹಾರ ಸೇವಿಸಿದ್ದು, ಫುಡ್ ಪಾಯಿಸನ್ ಆಗಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ತಕ್ಷಣವೇ ಮದ್ಗ್ಯಾಲ್‌ನಲ್ಲಿರುವ ಗ್ರಾಮೀಣ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ.
ಪ್ರಥಮ ಚಿಕಿತ್ಸೆ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕೆಲ ವಿದ್ಯಾರ್ಥಿಗಳನ್ನು ಸಾಂಗ್ಲಿ ಹಾಗೂ ಮಿರಾಜ್ನಲ್ಲಿರುವ ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದ್ಯ ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಲ್ಲಿನ ಆಸ್ಪತ್ರೆ ಮೂಲಗಳು ತಿಳಿಸಿವೆ.
ಉಮ್ಮಡಿಯ ಸಮತಾ ಆಶ್ರಮ ಶಾಲೆಯಲ್ಲಿ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ 5 ವರ್ಷದಿಂದ 15 ವರ್ಷ ವಯಸ್ಸಿನ ಹುಡುಗರು ಮತ್ತು ಹುಡುಗಿಯರೂ ಸೇರಿದ್ದಾರೆ. ಎಂದಿನಂತೆ ರಾತ್ರಿ ಆಶ್ರಮ ಶಾಲೆಯಿಂದ ಮಕ್ಕಳಿಗೆ ಊಟ ಕೊಡಲಾಗಿತ್ತು. ಆದರೆ, ಭಾನುವಾರ ರಾತ್ರಿ ಊಟ ಮಾಡಿದ ಬಳಿಕ ಮಕ್ಕಳಿಗೆ ಏಕಾಏಕಿ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆ ಕುರಿತಂತೆ ಇದೀಗ ಪ್ರಾಥಮಿಕ ತನಿಖೆ ನಡೆಸಲಾಗುತ್ತಿದೆ. ಏಕಕಾಲಕ್ಕೆ 170 ಮಕ್ಕಳು ಅಸ್ವಸ್ಥರಾಗಿರುವುದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.